ಟಿ.ನರಸೀಪುರ, ಫೆ.27: ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಹೊಳೆಸಾಲು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮಡವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 27/02/2026 ರಂದು ಬಹಳ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಮೂರ್ತಿಯವರು ಉದ್ಘಾಟಿಸಿದರು. ಸಮಾರಂಭದಲ್ಲಿ ಶ್ರೀ ಪುಟ್ಟಸ್ವಾಮಿ ಅ.ದಾ.ಸ.ನಿ, ಎಂ.ವಿ. ಶಿವಶಂಕರ್ ಸ.ನೌ.ಸಂ.ಅ, ಸಿದ್ದಮಲ್ಲಪ್ಪ ಉಪಾಧ್ಯಕ್ಷರು, ನಾಗೇಶ್ ಪ್ರ.ಕಾ, ನಾರಾಯಣಮೂರ್ತಿ ರಾ.ಪ.ಸ, ಮಹದೇವಸ್ವಾಮಿ ಪ.ಶಿ.ಸಂ.ಅ, ಸಿ.ಆರ್.ಪಿ. ಸಿದ್ದರಾಜು, ರಮೇಶ್ ಎಸ್‌ಡಿಎಂಸಿ, ಜಲೇಂದ್ರ ಟಿ.ಎಸ್ ಮುಖ್ಯೋಪಾಧ್ಯಾಯರು, ಭಾಸ್ಕರ್, ನಂದಿನಿ, ದೀಪಾರಾಣಿ ಸಹ ಶಿಕ್ಷಕರು, ಶ್ರೀಮತಿ ಮಮತಾ ಅಂಗನವಾಡಿ, ಪಾರ್ವತಮ್ಮ ಅಡುಗೆ ಸಿಬ್ಬಂದಿ ಸೇರಿದಂತೆ ಗ್ರಾಮದ ಮುಖಂಡರು, ಹಳೆಯ ವಿದ್ಯಾರ್ಥಿಗಳು ಹಾಗೂ ವರ್ಗಾವಣೆಯಾಗಿದ್ದ ಶಿಕ್ಷಕರಾದ ಶ್ರೀ ಪ್ರಸನ್ನ, ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುದ್ದು ಮಕ್ಕಳ ಹಾಡು, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೆಳೆದವು. ವಿಶೇಷವಾಗಿ ಪುಟ್ಟ ಮಕ್ಕಳ ನೃತ್ಯ ಪ್ರದರ್ಶನವನ್ನು ನೋಡಲು ದೂರದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸಿ ಕಣ್ತುಂಬಿಕೊಂಡರು.
ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಶಾಲಾ ಸಿಬ್ಬಂದಿ ವರ್ಗ ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಸಮಾರಂಭದ ಅಂತ್ಯದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ರುಚಿಕರವಾದ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು.
ಒಟ್ಟಾರೆ, ಮಡವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಗ್ರಾಮಸ್ಥರ ಐಕ್ಯತೆ, ಮಕ್ಕಳ ಪ್ರತಿಭೆ ಮತ್ತು ಶಿಕ್ಷಣದ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸುವಂತೆ ಯಶಸ್ವಿಯಾಗಿ ನೆರವೇರಿತು.
