ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (SIR)-2026ರ ಅಂಗವಾಗಿ ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ಸಮಗ್ರವಾಗಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹ ಮತದಾರರು ತಮ್ಮ ಗಣತಿ ನಮೂನೆಯನ್ನು ಆನ್‌ಲೈನ್ ಮೂಲಕವೇ ಸುಲಭವಾಗಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ಅರ್ಜಿಯನ್ನು ಸಲ್ಲಿಸಲು ಚುನಾವಣಾ ಆಯೋಗವು ಹಂತ-ಹಂತದ ಸರಳ ವಿಧಾನವನ್ನು ಪ್ರಕಟಿಸಿದೆ.
ಮೊದಲ ಹಂತ: ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಬಳಕೆ
ಮೊದಲಿಗೆ ಭಾರತೀಯ ಚುನಾವಣಾ ಆಯೋಗದ Voter Service Portal ಅಥವಾ ECINET ಮೊಬೈಲ್ ಆ್ಯಪ್ ಅನ್ನು ತೆರೆಯಿರಿ. ಈಗಾಗಲೇ ನೋಂದಾಯಿಸಿಕೊಂಡಿರುವವರು ತಮ್ಮ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಬಹುದು. ಹೊಸ ಬಳಕೆದಾರರು ಮೊದಲು Sign Up ಮಾಡಿ ಖಾತೆ ತೆರೆದು ನಂತರ ಲಾಗಿನ್ ಮಾಡಬೇಕು.
ಎರಡನೇ ಹಂತ: ಗಣತಿ ನಮೂನೆ ಭರ್ತಿ
ಲಾಗಿನ್ ಆದ ನಂತರ ಡ್ಯಾಶ್‌ಬೋರ್ಡ್‌ನಲ್ಲಿ ಕಾಣುವ “ಗಣತಿ ನಮೂನೆ ಭರ್ತಿ ಮಾಡಿ” ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿ, ನಿಮ್ಮ EPIC (ಮತದಾರರ ಗುರುತಿನ ಚೀಟಿ) ಸಂಖ್ಯೆ ನಮೂದಿಸಿ ವಿವರಗಳನ್ನು ಪಡೆಯಿರಿ.
ಮೂರನೇ ಹಂತ: ಒಟಿಪಿ ದೃಢೀಕರಣ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿದ ಬಳಿಕ, ಪೂರ್ವಭರ್ತಿಯಾಗಿರುವ ಗಣತಿ ನಮೂನೆ ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ವಿಳಾಸ, EPIC ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
ನಾಲ್ಕನೇ ಹಂತ: ಇ-ಸೈನ್ ಪ್ರಕ್ರಿಯೆ
ನಮೂನೆಯಲ್ಲಿರುವ ಅಗತ್ಯ ಮಾಹಿತಿಯನ್ನು ಪೂರ್ಣಗೊಳಿಸಿದ ಬಳಿಕ Aadhaar e-Sign ಮೂಲಕ ಸಹಿ ಮಾಡಬೇಕು. ಇದಕ್ಕಾಗಿ ಮತದಾರರ ಗುರುತಿನ ಚೀಟಿಯಲ್ಲಿರುವ ಹೆಸರು ಹಾಗೂ ಆಧಾರ್‌ನಲ್ಲಿರುವ ಹೆಸರು ಒಂದೇ ರೀತಿಯಲ್ಲಿರಬೇಕು. ಎಲ್ಲ ಮಾಹಿತಿ ಸರಿಯಾಗಿದ್ದರೆ ಇ-ಸೈನ್ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಐದನೇ ಹಂತ: ಅರ್ಜಿ ಸಲ್ಲಿಕೆ
ಇ-ಸೈನ್ ಪೂರ್ಣಗೊಂಡ ಬಳಿಕ ಅಂತಿಮವಾಗಿ Submit ಬಟನ್ ಒತ್ತಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ ಸ್ವೀಕೃತಿ ರಸೀದಿ (Acknowledgement Receipt) ಲಭ್ಯವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಅಥವಾ ಮುದ್ರಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
ಬಿಎಲ್‌ಒ ಪರಿಶೀಲನೆ
ನಂತರ ಬೂತ್ ಮಟ್ಟದ ಅಧಿಕಾರಿ (BLO) ಮನೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುವಾಗ ಈ ಸ್ವೀಕೃತಿ ಪತ್ರವನ್ನು ತೋರಿಸಬೇಕು. ಒಂದು ವೇಳೆ ಆನ್‌ಲೈನ್ ಮೂಲಕ ಸಲ್ಲಿಸಲು ಸಾಧ್ಯವಾಗದಿದ್ದರೆ, ಬಿಎಲ್‌ಒ ಅವರು ಮನೆಗೆ ಭೇಟಿ ನೀಡಿದಾಗ ಭೌತಿಕ ಗಣತಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಈ ವಿಶೇಷ ತೀವ್ರ ಪರಿಷ್ಕರಣೆ–2026ರ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಪ್ರತಿಯೊಬ್ಬ ಅರ್ಹ ನಾಗರಿಕರು ನಿಗದಿತ ಅವಧಿಯೊಳಗೆ ತಮ್ಮ ಗಣತಿ ನಮೂನೆಯನ್ನು ಸಲ್ಲಿಸಿ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.






