ನ್ಯೂಜರ್ಸಿ, ಜುಲೈ 20: ನ್ಯೂಜರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ತಂಡವು ಹೆಚ್ಚುವರಿ ವೇಳೆಯಲ್ಲಿ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಅರ್ಜೆಂಟೀನಾದ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಭಗ್ನಗೊಂಡಿತು.
ಪಂದ್ಯ ಮುಗಿದ ಬಳಿಕ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಕಣ್ಣೀರು ಹಾಕಿದ ದೃಶ್ಯ ಅಭಿಮಾನಿಗಳ ಮನಕುಲಕಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು “ಮೆಸ್ಸಿ… ಮೆಸ್ಸಿ…” ಎಂದು ಘೋಷಣೆ ಕೂಗಿ ದಂತಕಥೆಗೆ ಗೌರವ ಸಲ್ಲಿಸಿದರು.
ಸ್ಪೇನ್ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹೆಚ್ಚುವರಿ ವೇಳೆಯಲ್ಲಿ ಫೆರಾನ್ ಟೊರೆಸ್ ದಾಖಲಿಸಿದ ಏಕೈಕ ಗೋಲು ಪಂದ್ಯಕ್ಕೆ ನಿರ್ಣಾಯಕವಾಯಿತು. ಸುಮಾರು 16 ವರ್ಷಗಳ ಬಳಿಕ ಸ್ಪೇನ್ ವಿಶ್ವಕಪ್ ಗೆದ್ದು ಮತ್ತೊಮ್ಮೆ ಇತಿಹಾಸ ನಿರ್ಮಿಸಿತು.
ಪಂದ್ಯದ ಪ್ರಮುಖ ಘಟ್ಟದಲ್ಲಿ ಅರ್ಜೆಂಟೀನಾದ ಎಂಜೋ ಫರ್ನಾಂಡಿಸ್ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನ ತೊರೆಯಬೇಕಾಯಿತು. ಹತ್ತು ಆಟಗಾರರೊಂದಿಗೆ ಆಡಿದ ಅರ್ಜೆಂಟೀನಾ ಆಕ್ರಮಣಕಾರಿ ಆಟ ಪ್ರದರ್ಶಿಸಲು ವಿಫಲವಾಗಿ, ಗೋಲು ದಾಖಲಿಸುವ ಅವಕಾಶ ಕಳೆದುಕೊಂಡಿತು.
ಟೂರ್ನಿಯಲ್ಲಿ ಮೆಸ್ಸಿ ಎಂಟು ಗೋಲು ಹಾಗೂ ನಾಲ್ಕು ಅಸಿಸ್ಟ್‌ಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದರೂ, ಫೈನಲ್‌ನಲ್ಲಿ ಸ್ಪೇನ್‌ನ ಬಲಿಷ್ಠ ರಕ್ಷಣಾ ವಿಭಾಗದ ಎದುರು ಅವರ ಮ್ಯಾಜಿಕ್ ನಡೆಯಲಿಲ್ಲ.
ವಿಶ್ವಕಪ್ 2026 ವೈಯಕ್ತಿಕ ಪ್ರಶಸ್ತಿಗಳು
– ಗೋಲ್ಡನ್ ಬಾಲ್ (ಅತ್ಯುತ್ತಮ ಆಟಗಾರ): ರೊಡ್ರಿ (ಸ್ಪೇನ್)
– ಸಿಲ್ವರ್ ಬಾಲ್: ಲಿಯೋನೆಲ್ ಮೆಸ್ಸಿ
– ಕಂಚಿನ ಬಾಲ್: ಕೈಲಿಯನ್ ಎಂಬಾಪೆ
– ಗೋಲ್ಡನ್ ಶೂ: ಕೈಲಿಯನ್ ಎಂಬಾಪೆ
– ಸಿಲ್ವರ್ ಶೂ: ಲಿಯೋನೆಲ್ ಮೆಸ್ಸಿ
– ಕಂಚಿನ ಶೂ: ಎರ್ಲಿಂಗ್ ಹಾಲಂಡ್
– ಅತ್ಯುತ್ತಮ ಯುವ ಆಟಗಾರ: ಪೌ ಕುಬಾರ್ಸಿ
– ಗೋಲ್ಡನ್ ಗ್ಲೋವ್: ಉನೈ ಸೈಮೋನ್
– ಫಿಫಾ ಫೇರ್ ಪ್ಲೇ ಪ್ರಶಸ್ತಿ: ನೆದರ್ಲೆಂಡ್ಸ್
ಸ್ಪೇನ್ ನಾಯಕ ರೊಡ್ರಿ ಪಂದ್ಯಾವಳಿಯುದ್ದಕ್ಕೂ ನೀಡಿದ ಅಮೋಘ ಪ್ರದರ್ಶನಕ್ಕಾಗಿ ಗೋಲ್ಡನ್ ಬಾಲ್ ಪ್ರಶಸ್ತಿಗೆ ಭಾಜನರಾದರು. ಯುರೋ 2024ರ ಬಳಿಕ ವಿಶ್ವಕಪ್‌ನಲ್ಲೂ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ ಅವರು ತಮ್ಮ ಸಾಧನೆಗೆ ಮತ್ತೊಂದು ಚಿನ್ನದ ಗರಿ ಸೇರಿಸಿಕೊಂಡರು.





