ನವದೆಹಲಿ, ಜು. 25:
ನೀಟ್-ಯುಜಿ (NEET-UG) ಪರೀಕ್ಷೆಯ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಘೋಷಿಸಿದ್ದಾರೆ. ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಗಳ ನಡುವೆಯೇ ಅವರ ಈ ನಿರ್ಧಾರ ಗಮನ ಸೆಳೆದಿದೆ.
ರಾಜೀನಾಮೆ ಪ್ರಕಟಿಸಿದ ಬಳಿಕ ಎಕ್ಸ್ನಲ್ಲಿ ಬರೆದುಕೊಂಡಿರುವ ಧರ್ಮೇಂದ್ರ ಪ್ರಧಾನ್, ನೀಟ್ ಪರೀಕ್ಷೆಯ ಅಕ್ರಮ ಪ್ರಕರಣ ಬೆಳಕಿಗೆ ಬಂದ ಮೊದಲ ದಿನವೇ ತಾವು ಪ್ರತಿಕ್ರಿಯಿಸಿದ್ದು, ಅದರ ನೈತಿಕ ಹೊಣೆಗಾರಿಕೆಯನ್ನು ಸಹ ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.


“ಕಳೆದ ನಾಲ್ಕು ದಶಕಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ನಾನು ಸಮರ್ಪಿತನಾಗಿ ಕೆಲಸ ಮಾಡಿದ್ದೇನೆ. ಬಲಿಷ್ಠ ಹಾಗೂ ಸಮಗ್ರ ಶಿಕ್ಷಣ ವ್ಯವಸ್ಥೆಯೇ ರಾಷ್ಟ್ರದ ಭವಿಷ್ಯಕ್ಕೆ ಅಡಿಪಾಯ ಎಂಬ ನಂಬಿಕೆ ನನ್ನದು. ದೇಶದ ಯುವಕರ ಕನಸು, ಆಶಯ ಮತ್ತು ನಿರೀಕ್ಷೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಸೇವೆ ಮಾಡುವ ಅವಕಾಶ ದೊರೆತಿದ್ದಕ್ಕೆ ಕೃತಜ್ಞನಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.
ಮೇ 3, 2026ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಬಳಿಕ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಜೊತೆಗೆ ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ NEET ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳು ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿ, ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದವು. ಈ ಬೆಳವಣಿಗೆಗಳ ನಡುವೆಯೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ್ದಾರೆ.






