ನವದೆಹಲಿ, ಆಗಸ್ಟ್ 19: ಅನುಮಾನಾಸ್ಪದ ವಿದೇಶಿ ಹಣ ರವಾನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಆ18ರಿಂದ ದೇಶಾದ್ಯಂತ ವಿಶೇಷ ಪರಿಶೀಲನಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಳೆದ ಮೂರು ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ವಿದೇಶಕ್ಕೆ ಹಣ ರವಾನೆ ಮಾಡಿರುವ ಕೆಲವು ಸಂಸ್ಥೆಗಳ ವಹಿವಾಟು ಹಾಗೂ ಹಣದ ಮೂಲದ ಕುರಿತು ಇಲಾಖೆ ಅನುಮಾನ ವ್ಯಕ್ತಪಡಿಸಿದೆ.ಕೇಂದ್ರ ಹಣಕಾಸು ಸಚಿವಾಲಯದ ಆದಾಯ ತೆರಿಗೆ ಇಲಾಖೆ, ಕೃತಕ ದತ್ತಿ ಟ್ರಸ್ಟ್‌ಗಳ ಮೂಲಕ ನಕಲಿ ದೇಣಿಗೆ ಹಾಗೂ ಕೊಡುಗೆಗಳಿಗೆ ಸಂಬಂಧಿಸಿದ ಅಕ್ರಮ ಹಣಕಾಸು ವಹಿವಾಟು ನಡೆಸುತ್ತಿದ್ದ ಜಾಲವೊಂದರ ಕುರಿತು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.ಪ್ರಾಥಮಿಕ ಪರಿಶೀಲನೆಯಲ್ಲಿ ವಿದೇಶಕ್ಕೆ ಹಣ ರವಾನೆ ಮಾಡಿರುವ ಹಲವು ಸಂಸ್ಥೆಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿರುವುದು ಅಥವಾ ಅತ್ಯಲ್ಪ ವಹಿವಾಟು ತೋರಿಸಿರುವುದು ಕಂಡುಬಂದಿದೆ. ಆದರೆ, ಇದೇ ಸಂಸ್ಥೆಗಳು ತಮ್ಮ ವಹಿವಾಟಿಗೆ ಹೋಲಿಸಿದರೆ ಭಾರಿ ಪ್ರಮಾಣದ ವಿದೇಶಿ ವಿನಿಮಯವನ್ನು ರವಾನೆ ಮಾಡಿರುವುದು ಗಮನಕ್ಕೆ ಬಂದಿದೆ.
ಫ್ರೈಟ್ ಪಾವತಿ, ಸಾಫ್ಟ್‌ವೇರ್ ಆಮದು ಹಾಗೂ ಸಲಹಾ ಸೇವೆಗಳ ಹೆಸರಿನಲ್ಲಿ ಹಣ ರವಾನೆ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಿದ್ದರೂ, ಸಂಸ್ಥೆಗಳ ನೈಜ ಚಟುವಟಿಕೆಗಳು ಹಾಗೂ ಹಣ ರವಾನೆಯ ಉದ್ದೇಶಗಳ ನಡುವೆ ಹೊಂದಾಣಿಕೆ ಕಂಡುಬಂದಿಲ್ಲ. ಕೆಲವು ಸಂಸ್ಥೆಗಳು ತಮ್ಮ ದಾಖಲೆಗಳಲ್ಲಿ ನಮೂದಿಸಿರುವ ವಿಳಾಸಗಳಲ್ಲಿಯೇ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿಯೂ ಪರಿಶೀಲನೆಯಲ್ಲಿ ಲಭ್ಯವಾಗಿದೆ.
ಇದೇ ವೇಳೆ, ಕಳೆದ ಅವಧಿಯಲ್ಲಿ Form 15CB ಪ್ರಮಾಣಪತ್ರಗಳನ್ನು ನೀಡಿರುವ ವೃತ್ತಿಪರರ ಮಾಹಿತಿಯನ್ನೂ ಇಲಾಖೆ ವಿಶ್ಲೇಷಿಸಿದೆ. ಹೆಚ್ಚಿನ ಸಂಖ್ಯೆಯ ಪ್ರಮಾಣಪತ್ರಗಳನ್ನು ಸೀಮಿತ ಸಂಖ್ಯೆಯ ವೃತ್ತಿಪರರು ನೀಡಿರುವುದು ಗಮನಕ್ಕೆ ಬಂದಿದೆ. ವಿದೇಶಿ ಹಣ ರವಾನೆಗೆ ಸಂಬಂಧಿಸಿದಂತೆ ತೆರಿಗೆ ಅನ್ವಯಿಸುವುದೇ ಎಂಬುದನ್ನು ಲೆಕ್ಕಪತ್ರಗಳು ಹಾಗೂ ಸಂಬಂಧಿತ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಪ್ರಮಾಣೀಕರಿಸುವ ಜವಾಬ್ದಾರಿ ಲೆಕ್ಕಪರಿಶೋಧಕರ ಮೇಲಿದೆ.
ಈ ಹಿನ್ನೆಲೆಯಲ್ಲಿ ಪ್ರಮಾಣಪತ್ರ ನೀಡುವ ಮೊದಲು ಅಗತ್ಯವಾದ ಪರಿಶೀಲನೆ ಮತ್ತು ವೃತ್ತಿಪರ ಎಚ್ಚರಿಕೆ ವಹಿಸಲಾಗಿದೆಯೇ ಎಂಬುದರ ಕುರಿತು ಇಲಾಖೆ ತನಿಖೆ ನಡೆಸುತ್ತಿದೆ.
ಆಗಸ್ಟ್ 18, 2026ರಂದು ಆರಂಭವಾದ ದೇಶವ್ಯಾಪಿ ಪರಿಶೀಲನಾ ಕಾರ್ಯಾಚರಣೆಯಲ್ಲಿ ಸುಮಾರು 394 ಸಂಸ್ಥೆಗಳು ಮತ್ತು 36 ವೃತ್ತಿಪರರನ್ನು ಒಳಪಡಿಸಲಾಗಿದೆ. ಇದರಲ್ಲಿ ದೇಶದ ಭೂ ಗಡಿಗಳಿಗೆ ಹೊಂದಿಕೊಂಡಿರುವ ರಾಜ್ಯಗಳಲ್ಲಿರುವ 117 ಸಂಸ್ಥೆಗಳೂ ಸೇರಿವೆ.
ವಿದೇಶಿ ಹಣ ರವಾನೆ ಪ್ರಮಾಣ, ಸಂಸ್ಥೆಗಳ ನೈಜ ವಹಿವಾಟು, ಹಣದ ಉದ್ದೇಶ, ಸಂಸ್ಥೆಗಳ ವಿಳಾಸ ಹಾಗೂ ಅವುಗಳ ಹಿಂದೆ ಇರುವ ವ್ಯಕ್ತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ.
Form 15CB ಅಥವಾ Form 146 ಪ್ರಮಾಣಪತ್ರಗಳನ್ನು ನೀಡುವ ಲೆಕ್ಕಪರಿಶೋಧಕರು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಾದ ಜಾಗರೂಕತೆ, ಪರಿಶ್ರಮ ಮತ್ತು ವೃತ್ತಿಪರ ನಿರ್ಣಯದೊಂದಿಗೆ ಪ್ರಮಾಣಪತ್ರ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಪರಿಶೀಲನೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.






