ಮೈಸೂರು: ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ಆಗಸ್ಟ್ 9, 2026ರಂದು ಮೈಸೂರು ಜಿಲ್ಲೆಯ ಬಜ್ಜೆಗೌಡನಕೊಪ್ಪಲು ಗ್ರಾಮದಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀಮತಿ ನೀಲಾವತಿ ಹಾಗೂ ಡಾ. ಕೆ. ಮಹದೇವಸ್ವಾಮಿ (ಅಂಕಪ್ಪ) ಅವರ ಪುತ್ರರಾದ ಶ್ರೀ ಜಿ.ಎಂ. ಪುನೀತ್ ಕುಮಾರ್ ಮತ್ತು ಶ್ರೀ ಜಿ.ಎಂ. ಸಂಜಯ್ ಕುಮಾರ್ ಅವರನ್ನು ಸನ್ಮಾನಿಸಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ತಮ್ಮ ಸ್ವಂತ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕ ಔಷಧಿಗಳನ್ನು ಬಳಸದೆ, ಸಾವಯವ ಗೊಬ್ಬರವನ್ನು ಬಳಸಿಕೊಂಡು ಟೊಮ್ಯಾಟೊ, ಬೀನ್ಸ್, ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಸಿದ ಸಾಧನೆಯನ್ನು ಗುರುತಿಸಿ ಇವರಿಗೆ ಈ ಗೌರವ ನೀಡಲಾಯಿತು.
ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ರವಿಕುಮಾರ್ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸೋಮಲಿಂಗಪ್ಪ ಛಬ್ಬಿ ಅವರು ಚಿನ್ನದ ಪದಕ ಪ್ರದಾನ ಮಾಡಿ ಪುನೀತ್ ಕುಮಾರ್ ಮತ್ತು ಸಂಜಯ್ ಕುಮಾರ್ ಅವರನ್ನು ಅಭಿನಂದಿಸಿದರು.

ರಾಸಾಯನಿಕ ಮುಕ್ತ ಹಾಗೂ ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡಿ, ಆರೋಗ್ಯಕರ ಬೆಳೆ ಉತ್ಪಾದನೆಯೊಂದಿಗೆ ಕೃಷಿ ಕ್ಷೇತ್ರದಲ್ಲಿ ಮಾದರಿಯಾಗಿರುವ ಇವರ ಸಾಧನೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು ಕೃಷಿಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಇಂತಹ ಸಾಧನೆಗಳು ಪ್ರೇರಣೆಯಾಗಲಿವೆ ಎಂದು ಈ ಸಂದರ್ಭದಲ್ಲಿ ಶ್ರೀ ಸೋಮಲಿಂಗಪ್ಪ ಛಬ್ಬಿ ಅವರು ಹೇಳಿದರು.

