ಸಿರಿಗೇರಿ : ನ13; ಬರೀ ಕನಸೆಂಬ ಭ್ರಮಲೋಕದಲ್ಲಿ ಬದುಕದೆ, ಅದನ್ನು ಸಾಕಾರಗೊಳಿಸುವ ಹಂಬಲ ಬೇಕು ಎಂದು ಗೃಹಮಂತ್ರಿ ದಕ್ಷತ ಪದಕ ಹಾಗೂ ಮುಖ್ಯಮಂತ್ರಿ ಪ್ರಶಸ್ತಿ ವಿಜೇತರಾದ ಪೋಲಿಸ್ ವಲಯ ನಿರೀಕ್ಷಕರಾದ ಎಂ. ಶ್ರೀನಿವಾಸ ರಾವ್ ಕರೆ ನೀಡಿದರು. ಅವರು ಇಲ್ಲಿನ ನಿಮಗಾಗಿ ನಾವು ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯ ಕನಸು ಕಾಣುವುದು ತಪ್ಪಲ್ಲ. ಆದರೆ ಅದನ್ನು ಜೀವನದ ಉದ್ದಕ್ಕೂ ಛಲ ಬಿಡದೆ ಸಾಕಾರಗೊಳಿಸುವ ಪ್ರಯತ್ನ ಬಹುಮುಖ್ಯ.
ಇಡೀ ಜೀವನದಲ್ಲಿ ಯಾವುದೇ ಒಬ್ಬ ವ್ಯಕ್ತಿ ಮುನ್ನಡೆಗೆ ತಂದೆ ತಾಯಿ ಗುರು ಹಿರಿಯರ ಸಹಕಾರ ಅತಿ ಮುಖ್ಯ. ಯಾವುದೇ ಕಾರಣಕ್ಕೂ ಬೆಳೆಸಿದ ಗುರು ಹಿರಿಯರು ತಂದೆ ತಾಯಿಯನ್ನು ಮರೆಯಬೇಡಿ. ಆಸೆಗಳು ನೂರಾರಿದ್ದರು ಸಹ ಮನುಷ್ಯ ಸಾಮಾಜಿಕ ಬೆಳವಣಿಗೆ, ಅಭಿವೃದ್ಧಿ ಕಡೆ ಚಿತ್ತಹರಿಸುವುದು ಅತಿ ಮುಖ್ಯ. ಒಂದು ಹಳ್ಳಿಗಾಡಿನ ಸಿರುಗುಪ್ಪ ತಾಲೂಕಿನ ಸಿರಿಗೇರಿಯ ನೆಲದಲ್ಲಿ ಹುಟ್ಟಿದ ನಾನೇ ಪುಣ್ಯವಂತ ಎಂದು ಹೆಮ್ಮೆಯಿಂದ ಹೇಳಿದರು.
ತದನಂತರ ಅರಣ್ಯ ಇಲಾಖೆಯ ಅಧಿಕಾರಿ ಮೆಹಬೂಬ್ ಸಾಬ್ ಇಲ್ಲಿನ ನಿಮಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಪರಿಶ್ರಮ ವಹಿಸಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಆ ನಂತರ ಗ್ರಾಮದ ಪ್ರಮುಖರಾದ ಅಮರೇಶ ಗೌಡ, ಅಡಿವೆಯ ಸ್ವಾಮಿ, ಕ್ಯಾಂಪ್ ಸೂರಿ ಬಾಬು ಮಾತನಾಡಿ ಶ್ರೀನಿವಾಸ್ ರವರು ತೀರ ಬಡತನ ಕುಟುಂಬದಲ್ಲಿ ಹುಟ್ಟಿ ಬೆಳೆದು ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವವರೆಗೆ ಶ್ರಮ ಪಟ್ಟಿದ್ದು ಶ್ಲಾಘನೀಯ ಎಂದರು.
ಇದೇ ವೇಳೆ ಸಂಸ್ಥೆಯಿಂದ ಶ್ರೀನಿವಾಸ್ ಹಾಗೂ ಮೆಹಬೂಬ್ ಸಾಬ್ ಇವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಾಗಲೂರು ಮಲ್ಲನಗೌಡ, ಸಂಘದ ಪ್ರಮುಖರಾದ ಶೇಖರ್, ಪುನೀತ್ ಕುಮಾರ್, ನಾಗರಾಜ್, ವಿ ಹನುಮೇಶ, ಸಿ ಶಿವರಾಮ್ ಸೇರಿದಂತೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಗಣ್ಯರು ಇದ್ದರು. ಕಾರ್ಯಕ್ರಮವನ್ನು ಸಂಘದ ಪ್ರಮುಖರಾದ ಕೊಳ್ಳಿ ಶೇಖರ್ ಹಾಗೂ ಪುನೀತ್ ಕುಮಾರ್ ನಿರ್ವಹಿಸಿದರು.






