ಸಿರಿಗೇರಿ : ನವೆಂಬರ್ 9 ಸಮಾಜದಲ್ಲಿ ಉತ್ತಮ ಪ್ರಜೆಗಳು ಬೇಕೆಂದರೆ ಇದರಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಅದೇರೀತಿ ಉತ್ತಮ ಯುವಕರನ್ನು ಸಮಾಜಕ್ಕೆ ನೀಡುವುದು ತಂದೆ-ತಾಯಿಗಳ ಪಾತ್ರ ಮುಖ್ಯವಾಗಿದೆ. ತಂದೆ ತಾಯಿ ಮಕ್ಕಳನ್ನು ಹೇಗೆ ಬೆಳೆಸುತ್ತಾರೋ ಹಾಗೆ ಮಕ್ಕಳ ಮುಂದಿನ ಜೀವನ ಇರುತ್ತದೆ ಎಂದು ಸಿನಿಮಾ ರಂಗದ ಹಿರಿಯ ನಟಿ ಭವ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸೋಮವಾರ ಸಿರಿಗೇರಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ ಸಮುದಾಯ ಭವನದಲ್ಲಿ, ಅನ್ನಪೂರ್ಣ ಕ್ರಿಯೆಷನ್ಸ್ ಸಿರಿಗೇರಿ ವತಿಯಿಂದ ಆಯೋಜಿಸಿದ್ದ “ನನ್ನ ಸಿನಿಮಾ ಯಾನ” ಎನ್ನುವ ಚಿತ್ರನಟಿ ಭವ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದರು. ನನ್ನ ಸಿನಿಮಾ ರಂಗದ ಪಯಣದಲ್ಲಿ ನಾನು ನಿರ್ವಹಿಸಿದ ಜವಾಬ್ದಾರಿ ಮತ್ತು ಅಭಿನಯ ಕೆಲಸದಲ್ಲಿ ನನ್ನ ತಾಯಿ ನನಗೆ ಉತ್ತಮ ಬೆಂಬಲ ನೀಡುತ್ತಾ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ.
ನಾನು ನಾಯಕಿಯಾಗಿ ಅಭಿನಯ ಮಾಡಿದ ಚಿತ್ರಗಳಲ್ಲಿ ನನಗೆ ಉತ್ತಮ ನಿರ್ದೇಶಕರು ಮತ್ತು ಉತ್ತಮ ನಾಯಕ ನಟರು ಸಿಕ್ಕಿದ್ದು ನನ್ನ ಪುಣ್ಯ. ಅಭಿನಯ ಭಾರ್ಗವ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಮುರಳಿ, ರಾಮಕೃಷ್ಣ, ರಂತಹ ಮೇರು ನಟರು, ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದ ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಲ್ ರಂತಹ ನಿರ್ದೇಶಕರು ಇವರಿಂದಾಗಿ ನಾನು ಕನ್ನಡ ಚಿತ್ರರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದೆಯಾಗಿ ಕೆಲಸ ಮಾಡಲು ಅನುಕೂಲವಾಯಿತು.
ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕು, ಆದರೆ ಚಿತ್ರಗಳಲ್ಲಿನ ಒಳ್ಳೆಯ ಅಂಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು, ಜೀವನದಲ್ಲಿ ಒಳ್ಳೆಯ ಹೀರೋಗಳು ಆಗಬೇಕು ಎಂದು, ಮತ್ತು ಹೆಚ್ಚು ಮೊಬೈಲ್ ಗಳಲ್ಲಿ ಅತಿ ಹೆಚ್ಚು ಸಮಯ ಕೊಡದೆ ಸಾಧನೆಯ ಕಡೆಗೆ ಗಮನ ಹರಿಸಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು. ತಾವು ನಟಿಸಿದ ನೀ ಬರೆದ ಕಾದಂಬರಿ, ಪ್ರೇಮಪರ್ವ, ಹೃದಯಹಾಡಿತು, ಎಸ್ ಪಿ ಸಾಂಗ್ಲಿಯಾನ, ಹೆಬ್ಬುಲಿ, ಶಿವರಾಜ್, ಹೃದಯಗೀತೆ, ಪ್ರೇಮಪರೀಕ್ಷೆ, ಸತ್ವಪರೀಕ್ಷೆ, ಮುತ್ತೈದೆ ಇನ್ನು ಮುಂತಾದ ಚಿತ್ರಗಳ ಅನುಭವಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಕಾತ್ಯಾಯಿನಿ, ಸೊಸೈಟಿ ಮಾಜಿ ಅಧ್ಯಕ್ಷೇ ಜಿ.ಹೇಮಾವತಿ, ಮುಖ್ಯ ಶಿಕ್ಷಕರಾದ ಸುಮಂಗಲಮೇಟಿ, ಬಿ.ಆರ್ ಶಿವಕುಮಾರ್, ಟಿ. ಎಚ್. ಶೇಕ್ಷವಲಿ, ವಿ.ಹನಮೇಶ, ಬಿ.ಮಂಜಣ್ಣ, ಇತರರು ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳಿದರು. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಹೂಗಾರ್ ಬಸವರಾಜ, ಕೆ.ಬಸವರಾಜ, ಮಹಿಳೆಯರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನ್ನಪೂರ್ಣ ಕ್ರಿಯೇಶನ್ಸ್ ಸಿರಿಗೇರಿ ಯರಿಸ್ವಾಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.






