ವಿಜಯನಗರದಲ್ಲಿ ನಡೆದ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಮತ್ತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ತನ್ನ ತಂಗಿ ಮದುವೆಯಾಗದೇ ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ತಿಳಿದ ನಂತರ ‘ಕುಟುಂಬದ ಮರ್ಯಾದೆ ಹೋಗಿದೆ’ ಎಂಬ ಮನೋಭಾವದಿಂದ ಆರೋಪಿ ಅಕ್ಷಯ್ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರೀತಿಗೆ ತಂದೆ-ತಾಯಿಯ ಬೆಂಬಲವೇ ಕಾರಣ…?
ಮೃತಳಾದ ಅಮೃತ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧಕ್ಕೆ ತಂದೆ-ತಾಯಿ ಸಹ ಬೆಂಬಲ ನೀಡಿದ್ದರು. ಆದರೆ ಮದುವೆ ಆಗುವ ಮುನ್ನವೇ ಅಮೃತ ಗರ್ಭಿಣಿಯಾಗಿದ್ದಳು. ಇದರಿಂದ ಆಕ್ರೋಶಗೊಂಡ ಅಕ್ಷಯ್, ತಂಗಿಯ ಗರ್ಭಪಾತಕ್ಕೆ ಒತ್ತಾಯಿಸಿದ್ದ. ಆದರೆ ತಂದೆ-ತಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರ ಕುಟುಂಬದೊಳಗಿನ ಉದ್ವಿಗ್ನತೆಯನ್ನು ತೀವ್ರಗೊಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಹೇಗೆ ನಡೆಯಿತು….?
ಜನವರಿ 27ರಂದು ಈ ಭೀಕರ ಘಟನೆ ನಡೆದಿದೆ.
ಮೊದಲು ತಾಯಿ ವಿಜಯಲಕ್ಷ್ಮಿಯನ್ನು ಅಕ್ಷಯ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬಳಿಕ ತಾಯಿಯ ಮೃತದೇಹವನ್ನು ಮನೆಯ ಕೊಠಡಿಯಲ್ಲಿ ಇರಿಸಿದ್ದಾನೆ.
ನಂತರ ತಂಗಿ ಅಮೃತಳಿಗೆ ‘ನಿನಗೆ ಗಿಫ್ಟ್ ತಂದಿದ್ದೇನೆ’ ಎಂದು ಕರೆದು ಮನೆಗೆ ಕರೆಯಿಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕೊನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ತಂದೆ ಭೀಮರಾಜ್‌ರನ್ನು ಕೂಡ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮೃತದೇಹಗಳನ್ನು ಮನೆಯಲ್ಲೇ ಹೂತುಹಾಕಿದ ಕ್ರೂರತೆ
ಮೂರು ಮಂದಿಯನ್ನು ಕೊಂದ ನಂತರ ಅಕ್ಷಯ್ ಮನೆಯ ಹಾಲ್‌ನಲ್ಲೇ ಗುಂಡಿ ತೆಗೆದು ಮೃತದೇಹಗಳನ್ನು ಹೂತುಹಾಕಿದ್ದಾನೆ. ಹಲವು ದಿನಗಳ ಬಳಿಕ ದುರ್ವಾಸನೆ ಮತ್ತು ಅನುಮಾನದಿಂದ ಈ ಘಟನೆ ಬಹಿರಂಗವಾಗಿದೆ.
ಪೊಲೀಸರ ತನಿಖೆ ಮುಂದುವರಿಕೆ
ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲೀಸರು ಆರೋಪಿ ಅಕ್ಷಯ್‌ನನ್ನು ಬಂಧಿಸಿದ್ದಾರೆ. ಸ್ಥಳ ಪರಿಶೀಲನೆ, ಫೊರೆನ್ಸಿಕ್ ತನಿಖೆ ಸೇರಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಕುಟುಂಬದ ಒಳಜಗಳ ಮತ್ತು ‘ಆನರ್ ಕಿಲ್ಲಿಂಗ್’ ಕೋಣೆಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಸಮಾಜದಲ್ಲಿ ಮತ್ತೆ ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ಹತ್ಯೆಗಳ ಬಗ್ಗೆ ಆತಂಕ ಮೂಡಿಸಿದೆ.






