ಬೆಂಗಳೂರು ನಗರದ ರಾಜಾಜಿನಗರದಲ್ಲಿರುವ ಒರಿಯನ್ ಮಾಲ್ ನಲ್ಲಿ ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕಲ್ಟ್’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ, ನಾಯಕ ನಟ ಜೈದ್ ಖಾನ್ ಅಭಿನಯಿಸಿರುವ ‘ಕಲ್ಟ್’ ಸಿನಿಮಾವನ್ನು ಸಿಎಂ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಚಿತ್ರದ ಕಥೆ, ಸಂಭಾಷಣೆ, ಸಂಗೀತ ಹಾಗೂ ಕಲಾವಿದರ ಅಭಿನಯ ಸೇರಿ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿವೆ ಎಂದು ಪ್ರಶಂಸಿಸಿದರು.

“ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಒಳ್ಳೆಯ ಚಿತ್ರ ಇದು. ಚಿತ್ರತಂಡಕ್ಕೆ ಶುಭವಾಗಲಿ. ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಶತದಿನೋತ್ಸವ ಆಚರಿಸಲಿ,” ಎಂದು ಸಿಎಂ ಹಾರೈಸಿದರು.
ಸಂಪುಟ ಸಹೋದ್ಯೋಗಿಗಳು ಹಾಗೂ ಆತ್ಮೀಯರ ಜೊತೆ ಸಿನಿಮಾ ವೀಕ್ಷಿಸಿದ ಸಿಎಂ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ರೀತಿಯ ಪ್ರಯತ್ನಗಳನ್ನು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗುತ್ತಿರುವುದಾಗಿ ಹೇಳಿದರು. ‘ಕಲ್ಟ್’ ಸಿನಿಮಾ ಕುಟುಂಬ ಪ್ರೇಕ್ಷಕರನ್ನೂ ಸೆಳೆಯುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.






