ಡಿಸೆಂಬರ್ 31 ರಾತ್ರಿ ಆಯ್ತು ಎಂದರೆ,ಹುಡುಗ ಹುಡುಗಿಯರು ಮೊದಲೇ ಹೊಸ ವರ್ಷಕ್ಕೆ ‘ಏನು ಮಾಡಬೇಕು ಎಲ್ಲಿ ಹೋಗಬೇಕು,ಯಾವ ತರದ ಬಟ್ಟೆ ಹಾಕಿಕೊಳ್ಳಬೇಕು ‘ ಹೀಗೆ ಅನೇಕ ಪ್ಲ್ಯಾನ್ ಶುರು ಮಾಡುತ್ತಾರೆ.ಆದರೆ ಕಳೆದ ವರ್ಷ ನಾವು ಎಲ್ಲಿ ತಪ್ಪು ಮಾಡಿದ್ದೇವೆ, ಅದು ಹೇಗೆ ಆಯಿತು,ಈ ವರ್ಷ ಆದರೂ ಎಚ್ಚೆತ್ತು ಕೊಳ್ಳೋಣ ಎಂದು ಸ್ವಲ್ಪ ಆಲೋಚನೆ ಮಾಡಿ ಮುಂದಿನ ತಯಾರಿ ಮಾಡುವುದು ಉತ್ತಮ.ಹಾಗೆ ನೋಡಿದರೆ,ನಮಗೆ ಹೊಸ ವರ್ಷ ಎಂದರೆ ಯುಗಾದಿ.ಋತು ಬದಲಾವಣೆ ಗಿಡ ಮರಗಳು ಚಿಗುರುವುದು, ಕೋಗಿಲೆ ಗಾನ ಎಂಥಾ ಚೆಂದ,ನಮ್ಮೆಲ್ಲರ ಪುಣ್ಯ ಚೆನ್ನಾಗಿದೆ, ಆಗ ಕುಡಿದು ಕುಪ್ಪಳಿಸುವುದು ಇರುವುದಿಲ್ಲ.ದೇವರ ಪೂಜೆ, ಪುನಸ್ಕಾರದ ಸಂಭ್ರಮ ಸಡಗರ ಇರುತ್ತದೆ.
ಇನ್ನು ಈಗಿನ ಜನಾಂಗದವರು, ಡಿಸೆಂಬರ್ 31 ಹನ್ನೆರಡರ ನಂತರ ಹೊಸ ವರ್ಷದ ಹರ್ಷೋದ್ಗಾರದಿಂದ ಶುರು ಮಾಡುತ್ತಾರೆ,ಮಾಡಲಿ , ಆದರೆ ಮಧ್ಯೆ ರಾತ್ರಿ ಹದಿಹರೆಯದ ಹುಡುಗ ಹುಡುಗಿಯರು ತುಂಡು ಬಟ್ಟೆ ಧರಿಸಿ ಬೀದಿಯಲ್ಲಿ ಅಲೆದಾಡುವುದು, ಮದ್ಯ ಸೇವನೆ ಕುಣಿದಾಟ ಇವು ತಪ್ಪು ಎಂದು ನನ್ನ ಅನಿಸಿಕೆ ಸ್ನೇಹಿತರೇ.ಆಗಲೇ ಶುರು ಆಗುತ್ತದೆ ಕುಡಿದ ಮತ್ತಿನಲ್ಲಿ ಎಲ್ಲಿ ಏನು ತಪ್ಪು ಘಟನೆ ಸಂಭವಿಸುತ್ತದೆ ಯಾರಿಗೂ ಗೊತ್ತಾಗುವುದಿಲ್ಲ.ಕುಡಿದರೆ ಮಾತ್ರವೇ ಹೊಸ ವರ್ಷ ಆಚರಣೆ ಮಾಡಬೇಕು ಎಂದೇನೂ ಇಲ್ಲ.
ಕ್ಯಾಲೆಂಡರ್ ಬದಲಾವಣೆಯ ಹೊಸ ದಿನ ಆಚರಿಸಬೇಕು ಎಂದರೆ,ಮನೆ ಮಂದಿಯ ಜೊತೆಗೆ ಮನೆಯಲ್ಲಿ, ಎಲ್ಲರೂ ಸೇರಿ ಮನೆ ಒಳಗಿನ ಆಟ,ಹರಟೆ, ಹಾಡು, ರುಚಿಕರವಾದ ಊಟ ಮಾಡಿ ಹನ್ನೆರಡರ ನಂತರ ವಿಶ್ ಮಾಡಿ ನಿದ್ದೆ ಮಾಡಬಹುದು. ಆಂಗ್ಲರ ಹೊಸ ವರ್ಷದ ಆಚರಣೆಯ ಬಗ್ಗೆ ಮನೆಯಲ್ಲಿ ಮೊದಲಿನಿಂದ ಹಿರಿಯರು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.ಯುಗಾದಿ ದಿನದಂದು ಹೊಸ ವರ್ಷ ಆಚರಣೆಯ ಮಾಡಬೇಕು ಎಂದು ತಿಳಿಸಿ ಹೇಳಬಹುದು.ಇನ್ನು ಗೆಳೆಯ ಗೆಳತಿಯರು ಸೇರಿ ಮನೆಯಲ್ಲಿ ಹೊಸ ಹೊಸ ಆಟದೊಂದಿಗೆ ಹಿರಿಯರ ಜೊತೆ ಸೇರಿ ಆಚರಣೆ ಮಾಡಬಹುದು.ಹಾಗೂ ಒಂದು ವೇದಿಕೆ ಸೃಷ್ಟಿ ಮಾಡಿ ನಮಗೆ ತಿಳಿದಿರುವ ವಿದ್ಯೆ ಪ್ರದರ್ಶನ, ಪೌರಾಣಿಕ ಅಥವಾ ಸಾಮಾಜಿಕ ನಾಟಕ,ಇನ್ನು ನಮ್ಮ ಮನಃಶಾಂತಿಗೆ ಒಂದು ಜನವರಿಗೆ ಬಡ ವಿದ್ಯಾರ್ಥಿಗಳಿಗೆ, ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ಭೇಟಿ ನೀಡಿ ದೇಹದಿಂದ ಸೇವೆ ಮಾಡಿ, ಅನುಕೂಲ ಇದ್ದವರು ಹಣದ ಸಹಾಯ ಮಾಡಬಹುದು.ಇದರಿಂದ ಮನಕ್ಕೆ ಶಾಂತಿ, ನೆಮ್ಮದಿ ಖಂಡಿತ ದೊರಕುತ್ತದೆ. ಹೊಸ ವರ್ಷ ಒಂದು ಒಳ್ಳೆಯ ಕೆಲಸ ಮಾಡಿದರೆ ಸಿಹಿ ನೆನಪುಗಳು ಉಳಿಯಬಹುದು.ಬರೀ ನಮ್ಮ ಸುಖವನ್ನೇ ನೋಡಿಕೊಳ್ಳದೇ, ಅಸಹಾಯಕರಿಗೆ ಸಹಾಯ ಮಾಡಬಹುದು.ಬರೀ ಐಷಾರಾಮಿ ಜೀವನ ಒಂದೇ ಬಯಸಬಾರದು.ದೇಶದ ಹಿತಕ್ಕಾಗಿ ಪೂಜೆ ಸಲ್ಲಿಸಬೇಕು.ಒಂದು ರಾತ್ರಿ ಕುಡಿದು ಬೀದಿ ಬೀದಿಗಳಲ್ಲಿ ಅಲೆದು ಹಣ ಪೋಲಿ ಮಾಡುವುದರಿಂದ ಏನು ಸಾಧಿಸಿದ ಹಾಗೆ ಆಗುತ್ತದೆ.ಇದಕ್ಕೆಲ್ಲಾ ಸರ್ಕಾರ ಕಡಿವಾಣ ಹಾಕಬೇಕು.
ಈ ವರ್ಷ ಎರಡು ಮೂರು ಬಾರಿ ಕಾಲ್ತುಳಿತಕ್ಕೆ ಸಿಲುಕಿ ಎಷ್ಟು ಜನರು ಅಸುನೀಗಿದ್ದಾರೆ ಅದನ್ನು ನೆನಪು ಮಾಡಿಕೊಂಡು ಮುಂದೆ ಇಂತಹ ಅವಘಡಗಳು ಸಂಭವಿಸಬಾರದು ಎಂದು ಯುವ ಜನರು ಅರಿತುಕೊಳ್ಳಬೇಕು. ಮನುಷ್ಯ ಜನ್ಮ ಸಿಕ್ಕಿದೆ.ಬೇಡದ ಕೆಲಸ ಮಾಡಿ ಜೀವನ ಹಾಳು ಮಾಡಿಕೊಳ್ಳಬಾರದು.ಕುಡಿದ ಮತ್ತಿನಲ್ಲಿ ಏನು ಆಗುತ್ತದೆ ಎಂದು ಗೊತ್ತಿಲ್ಲ.ಯಾವ ಯಾವ ತರದ ಜನರು ಇರುತ್ತಾರೆ ಗೊತ್ತಿರುವುದಿಲ್ಲ,ಬೇಡದ ಅನಾಹುತಕ್ಕೆ ಗುರಿಯಾಗಬಾರದು..ಕುಡಿದು ಕುಣಿಯುವಾಗ ಕೆಲವರ ಮನದ ಸ್ಥಿತಿ ಸರಿಯಾಗಿ ಖಂಡಿತ ಇರುವುದಿಲ್ಲ.ಹೆಣ್ಣು ಹುಡುಗಿಯರಿಗೆ ಆಪತ್ತು ಬರಬಹುದು.ಇದೆಲ್ಲಾ ತಿಳಿದುಕೊಂಡು ಆಂಗ್ಲರ ಹೊಸ ವರ್ಷ ಆನಂದಿಸಬೇಕು.






