ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್ 2026ರ ರೋಚಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ದೆಹಲಿ ಕ್ಯಾಪಿಟಲ್ಸ್ ವುಮೆನ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ 2024 ಮತ್ತು 2026ರಲ್ಲಿ ಟ್ರೋಫಿ ಗೆದ್ದು ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ತಲಾ ಎರಡು ಕಿರೀಟ ಪಡೆದ ತಂಡಗಳ ಸಾಲಿಗೆ ಸೇರಿದೆ.
ಡೆಲ್ಲಿ ಬ್ಯಾಟಿಂಗ್ ದಾಳಿ 203 ರನ್‌ಗಳ ಮಹಾ ಸ್ಕೋರ್
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್‌ಗಳ ಭಾರೀ ಮೊತ್ತ ಕಲೆಹಾಕಿತು.
ಆರಂಭಿಕರಾದ ಲಿಜೇಲ್ ಲಿ 37(30) ಹಾಗೂ ಶಫಾಲಿ ವರ್ಮಾ 20(13) ಉತ್ತಮ ಆರಂಭ ನೀಡಿದರು. ನಂತರ ನಾಯಕಿ ಜೆಮಿಮಾ 57(37) ಮತ್ತು ಲಾರಾ ವೋಲ್ವಾರ್ಡ್ 44(25) ವೇಗದ ರನ್‌ಗಳೊಂದಿಗೆ ತಂಡವನ್ನು 200ರ ಗಡಿ ದಾಟಿಸಿದರು. ಕೊನೆಯಲ್ಲಿ ಚೆನ್ಲಿ ಹೆನ್ರಿ ಅಜೇಯ 35(15) ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಆರ್‌ಸಿಬಿಗೆ 204 ರನ್‌ಗಳ ಕಠಿಣ ಗುರಿ ನೀಡಿದರು.
ಸ್ಮೃತಿ ವೋಲ್ ಜೋಡಿ ಮಿಂಚು ಚಾಂಪಿಯನ್ ಕನಸು ಸಾಕಾರ
204 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವೋಲ್ ಅವರ ಅದ್ಭುತ ಜೊತೆಯಾಟ ಪಂದ್ಯವನ್ನು ತಿರುವು ಮಾಡಿತು.
ಮಂಧನಾ 41 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 87 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 79 ರನ್‌ಗಳ ಅಮೋಘ ಪ್ರದರ್ಶನ ನೀಡಿದರು. ಇವರಿಬ್ಬರ ಶತಕದ ಜೊತೆಯಾಟವೇ ಡೆಲ್ಲಿ ತಂಡದ ಕನಸನ್ನು ನುಚ್ಚುನೂರು ಮಾಡಿತು.
ಅಂತಿಮವಾಗಿ ಆರ್‌ಸಿಬಿ 19.4 ಓವರ್‌ಗಳಲ್ಲಿ ಗುರಿ ತಲುಪಿ ಟ್ರೋಫಿ ಮುತ್ತಿಕ್ಕಿತು.
ತತ್ತರಿಸಿದ ಡೆಲ್ಲಿ ಬೌಲಿಂಗ್
ಆರ್‌ಸಿಬಿ ಬ್ಯಾಟರ್‌ಗಳ ದಾಳಿಗೆ ಡೆಲ್ಲಿ ಬೌಲರ್‌ಗಳು ತತ್ತರಿಸಿದರು. ಶ್ರೀ ಚರಣಿ 3.4 ಓವರ್‌ನಲ್ಲಿ 46 ರನ್ ಬಿಟ್ಟುಕೊಟ್ಟರು. ನಂದಿನಿ ಶರ್ಮಾ 4 ಓವರ್‌ನಲ್ಲಿ 41 ರನ್ ನೀಡಿ ಒಂದು ವಿಕೆಟ್ ಪಡೆದರು. ಚಿನೆಲ್ಲೆ ಹೆನ್ರಿ 2 ವಿಕೆಟ್ ಪಡೆದರೂ ರನ್ ಹರಿವನ್ನು ತಡೆಯಲು ಸಾಧ್ಯವಾಗಲಿಲ್ಲ.
ಇತಿಹಾಸ ಬರೆದ ಆರ್‌ಸಿಬಿ
ಈ ಜಯದೊಂದಿಗೆ ಆರ್‌ಸಿಬಿ ಮಹಿಳಾ ತಂಡ ಎರಡು ಬಾರಿ ಡಬ್ಲ್ಯೂಪಿಎಲ್ ಕಿರೀಟ ಎತ್ತಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ಜೊತೆ ತಲಾ ಎರಡು ಟ್ರೋಫಿ ಗಳಿಸಿರುವ ಸಾಧನೆ ದಾಖಲಿಸಿದೆ.
ಒಟ್ಟಾರೆ, ವಡೋದರಾದಲ್ಲಿ ನಡೆದ ಈ ಫೈನಲ್ ಪಂದ್ಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ಉಳಿಯಲಿದೆ.


