ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯ ಸಮನ್ವಯದೊಂದಿಗೆ 1101 ಮುತ್ತೈದೆಯರಿಗೆ ಉಡಿ ತುಂಬುವ ಮಹತ್ವದ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಶ್ರೀ ಪೀಠದ ದಿವ್ಯ ಚೇತನರಾದ ಜಂಗಮ ಜ್ಯೋತಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಶಿವಲಿಂಗ ಮಹಾಸ್ವಾಮಿಗಳವರು ಹಾಗೂ ಜಗದ್ಗುರು ಜಂಗಮ ಮಹಾಪೀಠಾಧ್ಯಕ್ಷರಾದ ಶ್ರೀಮದ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ಅಪ್ಪಣೆಯ ಮೇರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಚೇತನ್ ಮರಿದೇವರು ಸನ್ನಿಧಿಯ ಉತ್ತರಾಧಿಕಾರಿಗಳಾದ ಮಹಾಸ್ವಾಮಿಗಳ ಆಶೀರ್ವಾದದಲ್ಲಿ ಕಾರ್ಯಕ್ರಮ ಅತ್ಯಂತ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮಕ್ಕೆ ಜನಪ್ರಿಯ ಜನನಾಯಕರು ಹಾಗೂ ಅರಸೀಕೆರೆ ಶಾಸಕರಾದ ಶ್ರೀ ಕೆ.ಎಂ. ಶಿವಲಿಂಗೇಗೌಡರು, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು, ಅವರ ಮುಂದಾಳತ್ವ ದೊರಕಿತು. ಜೊತೆಗೆ ಶ್ರೀ ಸಿದ್ಧೇಶ್ ನಾಗೇಂದ್ರ, ನಿತ್ಯ ದಾಸೋಹ ಸಮಿತಿ ಕಾರ್ಯದರ್ಶಿಗಳು ಕಾರ್ಯಕ್ರಮದ ಸಂಘಟನೆಗೆ ಪ್ರಮುಖ ಪಾತ್ರವಹಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸನ್ಮಾನ್ಯ ಶ್ರೀಮತಿ ಎನ್.ಎಸ್. ಮಹಾಲಕ್ಷ್ಮಿ, ಅಧ್ಯಕ್ಷರು ಆರ್ಯ ಫೌಂಡೇಶನ್, ಬೆಂಗಳೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕ್ಯಾನ್ಸರ್ ರೋಗಿಗಳು ಹಾಗೂ ವೃದ್ಧರಿಗೆ ಆಶ್ರಯ ಒದಗಿಸುವ ಮೂಲಕ ಅವರು ಮಾಡುತ್ತಿರುವ ಸಮಾಜಮುಖಿ ಸೇವೆಯನ್ನು ಎಲ್ಲರೂ ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಶಿವಶರಣೆ ಡಾ.ನೀಲಮ್ಮ ತಾಯಿಯವರು, ಅಸುಂಡಿ ಆಧ್ಯಾತ್ಮ ವಿದ್ಯಾಶ್ರಮ, ಆದಿಶಕ್ತಿನಗರ, ಗದಗ ಅವರು ಆಶೀರ್ವಚನ ನೀಡಿದರು. ಅಲ್ಲದೇ ಧಾರ್ಮಿಕ ಉಪನ್ಯಾಸವನ್ನು ಪ್ರವಚನ ಸಾರ್ವಭೌಮ ಸನ್ಮಾನ್ಯ ಶ್ರೀ ಎಂ. ಕಲ್ಲನಾಧ ಶಾಸ್ತ್ರಿಗಳವರು ನೀಡಿದರು. ಅವರ ಆಧ್ಯಾತ್ಮಿಕ ಸಂದೇಶಗಳು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದವು.
ಸಾವಿರಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಧಾರ್ಮಿಕ ಸಂಪ್ರದಾಯವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಭಕ್ತರು, ಗಣ್ಯರು ಹಾಗೂ ಸ್ಥಳೀಯರು ಭಾಗವಹಿಸಿ ಮಹಾಸಂಸ್ಥಾನದ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.





