ಟಿವಿ ಆನ್ ಮಾಡಿ ಏನಾದರೂ ಸಮಾಚಾರ ನೋಡೋಣ ಎಂದರೆ ಬರೀ ಕೊಲೆ, ಆತ್ಮಹತ್ಯೆ ಎಲ್ಲಿ ನೋಡಿದರೂ ದ್ವೇಷ, ವಂಚನೆ,ಜಗಳ ಒಬ್ಬರನ್ನೊಬ್ಬರು ಬೈಯುವುದು, ಇಂತಹದನ್ನು ನೋಡಿ ಮನಸ್ಸು ರೋಷಿ ಹೋಗುವುದರಲ್ಲಿ ಸಂಶಯವಿಲ್ಲ.ಈಗಿನ ವಾತಾವರಣದಲ್ಲಿ ನೆಮ್ಮದಿ ಮರೀಚಿಕೆ ಆಗಿದೆ ಎಂದರೆ ಸುಳ್ಳೇನಲ್ಲ ಅಲ್ಲವೇ ಸ್ನೇಹಿತರೇ.
ಚಿಕ್ಕ ಚಿಕ್ಕ ಮಕ್ಕಳು ಸ್ವಲ್ಪ ಏನಾದರೂ ಆಚೆ ಈಚೆ ಆದರೆ ಆತ್ಮಹತ್ಯೆಗೆ ಶರಣಾಗುತ್ತಾರೆ.ಮೊನ್ನೆ ಮೊನ್ನೆ ಬಂದ ಸಮಾಚಾರ ಎಲ್ಲರೂ ನೋಡಿದ್ದೆ ಇದೆ. ಹದಿನಾಲ್ಕು ವರ್ಷದ ಮಗು ಮನೆಯಲ್ಲಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇದರಿಂದ ಏನು ಲಾಭ ಬಂತು.ಹೆತ್ತ ತಂದೆ ತಾಯಿ ಪರಿಸ್ಥಿತಿ ಏನು ಆಗಬೇಕು.ಹೋದವರು ಹೋಗಿ ಬಿಡುತ್ತಾರೆ.ಆದರೆ ಅವರ ಸಾವು ಇದ್ದವರನ್ನು ಸಾಯುವ ಹಾಗೆ ಮಾಡುತ್ತದೆ.ಇದಕ್ಕೆ ಯಾರು ಕಾರಣ ಹಾಗೂ ಏನು ಕಾರಣ? ಬಹುಶಃ ಈಗಿನ ದಿನಗಳಲ್ಲಿ ಎಲ್ಲದರಲ್ಲೂ ಪೈಪೋಟಿ ತಮ್ಮ ಮಕ್ಕಳು ಇನ್ನೊಬ್ಬರ ಮಕ್ಕಳಿಗಿಂತ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬೇಕು. ಎಲ್ಲದಕ್ಕಿಂತ ಮುಂದೆ ಬರಬೇಕು.ಹಾಗೂ ಇನ್ನೊಂದು ಮೊಬೈಲ್ ಫೋನ್ ಕಾರಣ ಎಂದು ಹೇಳಬಹುದು.ಜಾಲತಾಣದಲ್ಲಿ ಬೇಡದ ಚಿತ್ರಗಳನ್ನು ನೋಡಿ ಮನಸ್ಸು ವಿಕಾರವಾಗಿ ಹೋಗುತ್ತದೆ.ಹೊರಗಡೆ ಆಟವಿಲ್ಲ ಯಾವಾಗಲೂ ಟಿ ವಿ, ಕಂಪ್ಯೂಟರ್ ಅದರ ಮುಂದೆ ಕುಳಿತು ಆಟ ಆಡುವುದುನ್ನು ಎಲ್ಲರ ಮನೆಯಲ್ಲೂ ಕಾಣಬಹುದು.ಅದರ ಬದಲು ಹೊರಗಡೆ ಆಟ ಆಡಬೇಕು, ಹಾಗೂ ಚಿಕ್ಕಂದಿನಿಂದಲೂ ಅವರಿಗೆ ಫೋನ್, ಕಂಪ್ಯೂಟರ್ ಒಳ್ಳೆಯದಲ್ಲ ಎಂದು ಹೇಳುತ್ತಾ ಇರಬೇಕು. ತಮ್ಮ ತಮ್ಮ ಧರ್ಮದವರು ತಮ್ಮ ಆಚಾರ ವಿಚಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಪ್ರಯತ್ನ ಮಾಡಬೇಕು.ಒಮ್ಮೆ ಸೋತರೆ ಮತ್ತೊಮ್ಮೆ ಪ್ರಯತ್ನ ಮಾಡಬೇಕು ಎಂದು ತಿಳಿಸಿ ಹೇಳಬಹುದು.ಬೇರೆ ಮಕ್ಕಳ ಮುಂದೆ ನಮ್ಮ ಮಕ್ಕಳನ್ನು ಅವಹೇಳನ ಯಾವತ್ತೂ ಮಾಡಬಾರದು. ಪ್ರತಿ ದಿನ ಮಕ್ಕಳು ಏನು ಮಾಡುತ್ತಾರೆ, ಶಾಲೆಯಲ್ಲಿ ಅವರ ನಡುವಳಿಕೆ ಬಗ್ಗೆ ವಿಚಾರಿಸುತ್ತಾ ಇರಬೇಕು.” ಫೇಲ್ ಆದರೂ ಪರವಾಗಿಲ್ಲ, ಮುಂದೆ ಚೆನ್ನಾಗಿ ಓದು ” ಎಂದು ಹೇಳುವ ಅಭ್ಯಾಸ ಇಟ್ಟುಕೊಳ್ಳಬೇಕು ಎಂದು ನನ್ನ ಅನಿಸಿಕೆ.ಒಮ್ಮೆ ಹೋದ ಪ್ರಾಣ ಮತ್ತೇ ಬರುವದಿಲ್ಲ.ಈಗಿನ ಕಾಲಕ್ಕೆ ತಕ್ಕಂತೆ ತಂದೆ ತಾಯಿಗಳು ಬದಲಾಗಬೇಕು.ಹೆಚ್ಚಿನ ಒತ್ತಡವನ್ನು ಹೇರದೇ ಇನ್ನೊಬ್ಬರೊಂದಿಗೆ ಹೋಲಿಸದೇ ಅವರೊಂದಿಗೆ ಸ್ನೇಹದಿಂದ ಇರಬೇಕು. ಮಕ್ಕಳೊಂದಿಗೆ ಮಕ್ಕಳಾಗಿ ಇರಬೇಕ. ಆತ್ಮಹತ್ಯೆ ತಪ್ಪು ಎಂದು ತಿಳಿಸಿ ಹೇಳಬಹುದು.
ಶ್ರೀದೇವಿ ಓಂಕಾರ್





