ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ಮಣ್ಣಿನ ವಾಸನೆಯಿಂದ ಬೆಳೆದ ಹರ್ಷವರ್ಧನ್ ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ತನ್ನದೇ ಗುರುತು ಮೂಡಿಸುತ್ತಿರುವ ಉದಯೋನ್ಮುಖ ನಟ. ಬಾಲ್ಯದಿಂದಲೇ ಶಾಲಾ ಕಾಲೇಜುಗಳಲ್ಲಿ ನಾಟಕ,ನೃತ್ಯ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತಿದ್ದರು.ಇವರಿಗೆ ಚಲನಚಿತ್ರಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದ , ಕನಸುಗಳನ್ನು ಕಣ್ಣಲ್ಲಿ ಕಟ್ಟಿಕೊಂಡೇ ಜೀವನದ ದಾರಿಯನ್ನು ಆರಿಸಿಕೊಂಡವರು.
ಶ್ರೀ ಎಂ.ಕೆ. ಶ್ರೀನಿವಾಸ್ ಮತ್ತು ಶ್ರೀಮತಿ ಅನುಸೂಯ ಅವರ ಮಗನಾದ ಹರ್ಷವರ್ಧನ್, ಪದವಿ ಪೂರ್ಣಗೊಳಿಸಿದ ನಂತರ “ಕೆಲಸಕ್ಕೆ ಹೋಗುತ್ತಿದ್ದೇನೆ” ಎಂದು ಮನೆಯವರಿಗೇಳಿ, ಒಳಗೊಳಗೆ ಚಿತ್ರರಂಗದ ದಾರಿ ಹಿಡಿದರು. ಅವಕಾಶಗಳಿಗಾಗಿ ನಿರ್ದೇಶಕರ ಕಚೇರಿಗಳ ಸುತ್ತಲೂ ಅಲೆದಾಡಿದರು. ಒಂದು ಭೇಟಿಯಲ್ಲಿ ನಿರ್ದೇಶಕರು “ನಮ್ಮ ಪ್ರೊಡಕ್ಷನ್ ಮ್ಯಾನೇಜರ್ನ್ನು ಸಂಪರ್ಕಿಸಿ, ನಿಮ್ಮ ಭಾವಚಿತ್ರವನ್ನು ಕೊಟ್ಟು ಹೋಗಿ” ಎಂದ ಮಾತು ಅವರಿಗೆ ಹೊಸ ಆಶಾಕಿರಣವಾಯಿತು.
ಅವಕಾಶಕ್ಕಾಗಿ ಮಾಡಿದ ನಿರಂತರ ಪ್ರಯತ್ನಗಳು ಅವರಿಗೆ ಸಹ ಕಲಾವಿದನಾಗಿ ಮೊದಲ ಹೆಜ್ಜೆ ಇಡುವ ಅವಕಾಶ ನೀಡಿದವು. ಶ್ರಮ, ಶಿಸ್ತಿನ ಕೆಲಸ ಮತ್ತು ಕಲೆಯ ಮೇಲಿನ ನಿಷ್ಠೆ ಈ ಮೂರು ಗುಣಗಳಿಂದ ಅವರು ಹಲವು ಪಾತ್ರಗಳನ್ನು ಸಂಪಾದಿಸಿದರು.
ಅವರು ಅಭಿನಯಿಸಿದ ಪ್ರಮುಖ ಚಿತ್ರಗಳಲ್ಲಿ ಉಪ್ಪಿ 2, ಐರಾವತ, ರಗಡ್, ಕೋಣ ಮುಂತಾದವು ಸೇರಿವೆ.
ಚಿತ್ರಗಳ ಜೊತೆಗೆ ಧಾರಾವಾಹಿಗಳಲ್ಲಿಯೂ ಅವರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಅವನು ಮತ್ತು ಶ್ರಾವಣಿ, ಸಪ್ತಪದಿ, ಶಾಂತಮ್ ಪಾಪಂ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಕಲಾವಿದನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿ, ವೇದಿಕೆಯ ಅನುಭವವನ್ನು ಚಿತ್ರರಂಗದ ಅಭಿನಯಕ್ಕೆ ಬೆಂಬಲವನ್ನಾಗಿ ಮಾಡಿಕೊಂಡಿದ್ದಾರೆ.

ಕನ್ನಡದ ದಿಗ್ಗಜ ಕಲಾವಿದ ಶಂಕರನಾಗ್ ಅವರಿಂದ ಸ್ಫೂರ್ತಿ ಪಡೆದ ಹರ್ಷವರ್ಧನ್, “ಯಾವ ಪಾತ್ರ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ” ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಹಲವು ವರ್ಷಗಳ ಹೋರಾಟದ ಬಳಿಕ, ಇಂದು ಅವರು ನಟರಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ಅವರ ಪರಿಶ್ರಮಕ್ಕೆ ಸಿಕ್ಕ ನ್ಯಾಯ.

‘ಕರುನಾಡ ನಿಧಿ’ ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಅವರು, “ನನಗೆ ಯಾವುದೇ ಬೆಂಬಲವಿಲ್ಲ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನನ್ನ ಶಕ್ತಿ. ಸಿನಿಮಾ ಅಭಿಮಾನಿಗಳು ನೀವೇ ನನ್ನ ಬೆಂಬಲ” ಎಂದು ಮನವಿ ಮಾಡಿದರು.
ಗ್ರಾಮೀಣ ಹಿನ್ನೆಲೆಯಿಂದ ಬಂದ ಯುವಕನೊಬ್ಬ, ಕನಸಿಗಾಗಿ ತೆಗೆದುಕೊಂಡ ಧೈರ್ಯದ ಹೆಜ್ಜೆಗಳು ಇಂದು ಫಲ ಕೊಡುತ್ತಿವೆ. ಹರ್ಷವರ್ಧನ್ ಅವರ ಈ ಪಯಣ, ಕನಸು ಕಾಣುವ ಅನೇಕ ಯುವಕರಿಗೆ ಪ್ರೇರಣೆ. ಕನ್ನಡ ಚಲನಚಿತ್ರ ರಂಗಕ್ಕೆ ಇನ್ನೊಬ್ಬ ಶ್ರಮಶೀಲ, ನಿಷ್ಠಾವಂತ ನಟ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

