ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಮೆರಿಕ ಹಾಗೂ ಇಸ್ರೆಲ್ ವಿರುದ್ಧ ಇರಾನ್ ತೀವ್ರ ಪ್ರತಿದಾಳಿಗಳನ್ನು ಮುಂದುವರೆಸುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಸುಮಾರು 300 ಮಿಲಿಯನ್ ಡಾಲರ್ ಮೌಲ್ಯದ ರಾಡಾರ್ ರಕ್ಷಣಾ ವ್ಯವಸ್ಥೆ ಧ್ವಂಸಗೊಂಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೋರ್ಡಾನ್ನಲ್ಲಿ ಸ್ಥಾಪಿಸಲಾಗಿರುವ ಅಮೆರಿಕದ ಥಾಡ್ ರಕ್ಷಣಾ ವ್ಯವಸ್ಥೆಯಲ್ಲಿ ಬಳಸುವ AN/TPY-2 ರಾಡಾರ್ ಹಾಗೂ ಅದರ ಪೂರಕ ಉಪಕರಣಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಈ ರಾಡಾರ್ ವ್ಯವಸ್ಥೆಯನ್ನು RTX ಕಾರ್ಪೊರೇಷನ್ ನಿರ್ಮಿಸಿದ್ದು, ಅದರ ಮೌಲ್ಯ ಸುಮಾರು 300 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಮಿಲಿಟರಿ ಮತ್ತು ಪೊಲಿಟಿಕಲ್ ಪವರ್ ಕೇಂದ್ರದ ಉಪ ನಿರ್ದೇಶಕ ರಿಯಾನ್ ಬ್ರಾಬ್ಸ್ಟ್ ಅವರ ಪ್ರಕಾರ, ಜೋರ್ಡಾನ್ನಲ್ಲಿರುವ ಥಾಡ್ ರಾಡಾರ್ ಮೇಲೆ ನಡೆದ ಈ ದಾಳಿ ಇರಾನ್ ನಡೆಸಿರುವ ದಾಳಿಗಳಲ್ಲಿ ಅತ್ಯಂತ ಪರಿಣಾಮಕಾರಿ ದಾಳಿಗಳಲ್ಲೊಂದು ಎಂದು ಹೇಳಲಾಗಿದೆ. ಆದರೆ, ಅಮೆರಿಕದ ಮಿಲಿಟರಿ ಹಾಗೂ ಅದರ ಪಾಲುದಾರ ರಾಷ್ಟ್ರಗಳು ಇನ್ನೂ ಹಲವು ರಾಡಾರ್ ವ್ಯವಸ್ಥೆಗಳನ್ನು ಕಾರ್ಯನಿರ್ವಹಿಸುತ್ತಿರುವುದರಿಂದ ಒಂದು ವ್ಯವಸ್ಥೆ ನಾಶವಾದರೂ ಗಂಭೀರ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಥಾಡ್ ರಕ್ಷಣಾ ವ್ಯವಸ್ಥೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅವುಗಳ ಅಂತಿಮ ಹಂತದಲ್ಲಿಯೇ ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದು ಕಡಿಮೆ ವ್ಯಾಪ್ತಿಯ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಗಿಂತ ಹೆಚ್ಚು ಸುಧಾರಿತವಾಗಿದ್ದು, ಸಂಕೀರ್ಣವಾದ ಕ್ಷಿಪಣಿ ಬೆದರಿಕೆಗಳನ್ನು ತಡೆಯಲು ಸಾಮರ್ಥ್ಯ ಹೊಂದಿದೆ.
ಒಂದು ಸಾಮಾನ್ಯ ಥಾಡ್ ಬ್ಯಾಟರಿಯಲ್ಲಿ ಸುಮಾರು 90 ಸೈನಿಕರು, ಟ್ರಕ್ಗಳ ಮೇಲೆ ಸ್ಥಾಪಿಸಲಾದ 9 ಲಾಂಚರ್ಗಳು, 48 ಇಂಟರ್ಸೆಪ್ಟರ್ ಕ್ಷಿಪಣಿಗಳು, TPY-2 ರಾಡಾರ್, ಯುದ್ಧತಾಂತ್ರಿಕ ಅಗ್ನಿ ನಿಯಂತ್ರಣ ಹಾಗೂ ಸಂವಹನ ಘಟಕಗಳಿದ್ದು, ಇದನ್ನು ಪ್ರಮುಖವಾಗಿ ಲಾಕ್ಹೀಡ್ ಮಾರ್ಟಿನ್ ಕಂಪನಿ ಅಭಿವೃದ್ಧಿಪಡಿಸಿದೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಈ ಉದ್ವಿಗ್ನತೆ ಜಾಗತಿಕ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


