ಹನೂರು : ಕಾಡು ಪ್ರಾಣಿಗಳ ದಾಳಿಯಿಂದಾಗಿ ಮುಸುಕಿನ ಜೋಳದ ಫಸಲು ನಾಶವಾಗಿರುವ ಘಟನೆ ಕೌದಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜರುಗಿದೆ.ತಾಲೂಕಿನ ಕೌದಳ್ಳಿ ಗ್ರಾಮದ ಪಚ್ಚಿಯಮ್ಮ ಜಮೀನಿನಲ್ಲಿ ತಡರಾತ್ರಿ ಕಾಡು ಪ್ರಾಣಿಗಳ ದಾಳಿಯಿಂದಾಗಿ ಲಕ್ಷಾಂತರ ರೂ ನಷ್ಟವಾಗಿದೆ.ಜೋಳದ ಫಸಲು ನಾಶ : ಪಚ್ಚಿಯಮ್ಮ ಕೌದಳ್ಳಿ ಗ್ರಾಮದ ಚಾಂದ್ ಪಾಷ ಎಂಬುವವರ ಜಮೀನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದೂ ಅವರ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬಂದು ನಿಂತಿತ್ತು. ಇದೇ ತಡರಾತ್ರಿ ಕಾಡಾನೆ ದಾಳಿ ಮಾಡಿರುವ ಪರಿಣಾಮ ರೈತ ಮಹಿಳೆ ಪಚ್ಚಿಯಮ್ಮಅವರಿಗೆ ಕೈಗೆ ಬಂದ ತುತ್ತು, ಬಾಯಿಗೆ ಬಾರದಾಗಿದೆ. ಸಾಲ ಸೋಲಾ ಮಾಡಿ ಬಿತ್ತನೆ ಬೀಜವನ್ನು ಖರೀದಿ ಮಾಡಿ ಜಮೀನು ಹದ ಮಾಡಿ ಬೆಳೆ ಬೆಳೆದ ರೈತನಿಗೆ ಈ ಘಟನೆ ಮತ್ತಷ್ಟು ಆತಂಕಕ್ಕೀಡು ಮಾಡಿದೆ. ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ.ಸಾಲದ ಸುಳಿಯಲ್ಲಿ ರೈತ : ತಮಗಿರುವ ಅಲ್ಪ ಜಮೀನಿನಲ್ಲಿ ಅದರಲ್ಲೂ ಗುತ್ತಿಗೆ ಪಡೆದು ಜಮೀನು ಮಾಡುತ್ತಿರುವ ರೈತರಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಫಸಲು ಕೈಕೊಟ್ಟರೆ, ಆತ ಮಾಲೀಕರಿಗೆ ಕಟ್ಟುವುದಾದರೂ ಹೇಗೆ ಜೊತೆಗೆ ತಾನು ಬದುಕುವುದಾದರೂ ಹೇಗೆ ಹಾಗಾಗಿ ರೈತ ಮಹಿಳೆ ಪರಿಚಯ ಅವರು ಸಾಲದ ಸುಳಿಯಲ್ಲಿ ಸಿಕ್ಕಿದಂತಾಗಿದೆ.
ಕಾಡಾನೆ ಉಪಟಳ ನಿಲ್ಲಿಸಿ : ಕಳೆದ ಹಲವಾರು ತಿಂಗಳಿನಿಂದಲೂ ಸಹ ದಿನನಿತ್ಯ ಒಂದಲ್ಲ ಒಂದು ಜಮೀನಿಗೆ ಲಗ್ಗೆ ಇಡುವ ಕಾಡಾನೆ ಸೇರಿದಂತೆ ಹಂದಿಗಳು ಬೆಳೆ ಹಾನಿ ಮಾಡುವುದರ ಜೊತೆಗೆ ಕೃಷಿ ಉಪಕರಣಗಳನ್ನು ಹಾನಿ ಮಾಡುತ್ತಿದೆ. ಜೊತೆಗೆ ಮುಖ್ಯವಾಗಿ ರೈತ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರೈತರ ನೆಮ್ಮದಿಯನ್ನು ಕಲಿಸಿಕೊಂಡಿರುವ ಕಾಡಾನೆಯನ್ನು ಹಿಡಿದು ಬೇರೆ ಸ್ಥಳಾಂತರ ಮಾಡಬೇಕು ಎಂದು ಕೌದಳ್ಳಿ ಗ್ರಾಮದ ರೈತರು ಒತ್ತಾಯ ಮಾಡಿದ್ದಾರೆ.


