ಹೋಳಿ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸಡಗರ ಸಂಭ್ರಮದಿಂದ ಆಚರಿಸುವ ಬಣ್ಣಗಳ ಚಿತ್ತಾರದ ಹಬ್ಬವಾಗಿದೆ.
ಬೇರೆ ಬೇರೆ ಪ್ರದೇಶಗಳಿಗನುಸಾರವಾಗಿ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ 5-6 ದಿನಗಳಲ್ಲಿ ಕೆಲವು ಕಡೆ 2ದಿನ ಮತ್ತು ಇನ್ನೂ ಕೆಲವು ಕಡೆ 5 ದಿನಗಳವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.
ಹಿಂದಿನ ಕಾಲದಲ್ಲಿ ಡೌಂಡಾ ಎಂಬ ರಾಕ್ಷಸಿಯು ಒಂದು ಊರಿನೊಳಗೆ ನುಗ್ಗಿ ಸಣ್ಣ ಪುಟ್ಟ ಮಕ್ಕಳಿಗೆ ರೋಗಗಳು ಬರುವಂತೆ ಮಾಡಿ ಅವರನ್ನು ಬಾಧಿಸುತ್ತ , ಪೀಡಿಸುತ್ತಿದ್ದಳು. ಅವಳನ್ನು ಹೊರ ಹಾಕಲು ಜನರು ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ,ಆಗ ನಾರದ ಮುನಿಗಳು ರಾಜ ಯುಧಿಷ್ಠಿರನಿಗೆ ಒಂದು ಉಪಾಯ ನೀಡಿದರು ಅದುವೇ ಹೋಲಿಕ ಮಹೋತ್ಸವ.
ಜನರು ಹೋಳಿ ಹೊತ್ತಿಸಿ ತಮಟೆ – ವಾದ್ಯಗಳನ್ನು ಬಾರಿಸುತ್ತಾ ಆ ರಾಕ್ಷಸಿಯನ್ನು ಊರಿನಿಂದ ಓಡಿ ಹೋಗುವಂತೆ ಮಾಡಿದರು.
ಉತ್ತರ ಭಾರತದಲ್ಲಿ ಹೋಳಿಯ ಮೋದಲೇ 3 ದಿನ ಬಾಲಕೃಷ್ಣನನ್ನ ತೊಟ್ಟಿಲಿನಲ್ಲಿ ಮಲಗಿಸಿ ಕೃಷ್ಣನ ಉತ್ಸವವನ್ನು ಆಚರಿಸುತ್ತಾರೆ.
ಪಾಲ್ಗುಣ ಹುಣ್ಣಿಮೆಗೆ ಪೊತನಿ ರಾಕ್ಷಸಿಯ ಪ್ರತಿಕೃತಿಯನ್ನು ಮಾಡಿ ಅದನ್ನು ರಾತ್ರಿ ವೇಳೆ ಸುಡುತ್ತಾರೆ.
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ತನ್ನ ಸ್ನೇಹಿತರು, ಗೋಪಿಕೆಯರೋಡನೆ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ಆಡಿದ ಆಟ, ರಾಸಲೀಲೆಯು ಬಣ್ಣದ ಹಬ್ಬ ಹೋಳಿಯಾಗಿದೆ.
ಇನ್ನು ಕೆಲವು ಕಡೆ ಹೊಸದಾಗಿ ಮದುವೆಯಾದ ನವ ದಂಪತಿಗಳಿಗೆ ಅದರಲ್ಲೂ ಅಳಿಯನಿಗೆ ಅತ್ತೆಯ ಮನೆಯಲ್ಲಿ ರಾತ್ರಿ ಉಪವಾಸ ಕಾರ್ಯಕ್ರಮವಿದ್ದು ಕೇವಲ ಹಲಸಿನ ಹಣ್ಣಿನಿಂದ ಮಾಡಿದ ಪಂಚಾಮೃತವನ್ನು ಸೇವಿಸುವ ವಾಡಿಕೆ ಸಂಪ್ರದಾಯವನ್ನು ಈಗಲು ಕಾಣಬಹುದು.
ಕಾಮದಹನದ ಜೊತೆ ನಿಮ್ಮೆಲ್ಲರ ಅಜ್ಞಾನ, ಅಹಂಕಾರ, ದುರ್ಗುಣಗಳನ್ನು ಬೆಂಕಿಯಲ್ಲಿ ಸುಟ್ಟು ಆ ಬೂದಿಯನ್ನು ಪ್ರಸಾದವೆಂದು ಮೈಗೆಲ್ಲಾ ಹಚ್ಚಿಕೊಳ್ಳುವ ಶಾಸ್ತ್ರವಿತ್ತು.
ಕಾಲಕ್ರಮೇಣ ಇದು ಸಾತ್ವಿಕ ಬಣ್ಣಗಳನ್ನು ಎರಚುವ ಪದ್ಧತಿಯಾಗಿ ರೂಪುಗೊಂಡಿತು.
ಆರೋಗ್ಯದ ದೃಷ್ಟಿಯಿಂದ ಚಳಿಗಾಲ ಮುಗಿದು ಬೇಸಿಗೆ ಶುರುವಾಗುವ ಈ ಸಮಯ ವಾತಾವರಣದಲ್ಲಿ ಅನೇಕ ರೋಗಾಣುಗಳು ಹುಟ್ಟಿಕೊಳ್ಳುತ್ತವೆ.
ಹಿಂದೆ ಬೇವಿನ ಎಲೆ,ಅರಿಶಿಣ ಕುಂಕುಮ ಹೂವುಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಎರಚಿ ಕೊಳ್ಳುತ್ತಿದ್ದರು ಆ ಔಷಧೀಯ ಗುಣಗಳು ಚರ್ಮದ ಮೂಲಕ ದೇಹ ಸೇರಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದ್ದವು.
ಆದರೆ ಈ ಆಧುನಿಕ ಯುಗದಲ್ಲಿ ನಾವೆಲ್ಲರೂ ರಾಸಾಯನಿಕಯುಕ್ತ ವಸ್ತುಗಳ, ಬಣ್ಣಗಳನ್ನು ಬಳಸಿ ರೋಗಗಳನ್ನು ಆಹ್ವಾನ ಮಾಡುತ್ತಿದ್ದೇವೆ.ನಮ್ಮ ಕೈಯಾರೆ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು,ರೋಗ ನಿರೋಧಕ ಶಕ್ತಿ ಕುಗ್ಗಿಸಿ ಜೀವಿತಾವಧಿಯ ಸಮಯವನ್ನು ಕುಂಠಿತಗೊಳಿಸಿಕೊಳ್ಳುತ್ತಿದ್ದೇವೆ
ಬಣ್ಣಗಳನ್ನು ಹಚ್ಚುವಾಗ, ಬಣ್ಣದ ನೀರನ್ನು ಒಬ್ಬರಿಗೊಬ್ಬರು ಎರಚಿಕೊಳ್ಳುವಾಗ ಯಾವುದೇ ಬೇದವಿಲ್ಲದೆ ಮನುಷ್ಯನ ಅಹಂಕಾರವನ್ನು ಕಡಿಮೆ ಮಾಡಿ ಪರಸ್ಪರ ಪ್ರೀತಿ, ಪ್ರೇಮ, ಕ್ಷಮೆ ಮತ್ತು ಐಕ್ಯತೆಯನ್ನು ಬೆಳೆಸುತ್ತದೆ.
ಬಣ್ಣವನ್ನು ಒಬ್ಬರಿಗೊಬ್ಬರು ಎರಚಿಕೊಳ್ಳುವುದಕ್ಕಿಂತ ಮೇಲಕ್ಕೆ ಎರಚುವುದರಿಂದ ಆಯಾ ಬಣ್ಣಕ್ಕೆ ಸಂಬಂಧಿಸಿದ ದೇವತೆಗಳ ಆಶೀರ್ವಾದವು ಬ್ರಹ್ಮಾಂಡಕ್ಕೆ ದೊರೆಯುತ್ತದೆ ಎಂಬ ಭಾವನೆ ಇದೆ.
ರಾಸಾಯನಿಕ ಬಣ್ಣಗಳು, ಮಣ್ಣು ,ಮೊಟ್ಟೆ, ಕಲುಷಿತ ನೀರನ್ನು ಎರಚುವುದರಿಂದ ರೋಗ ರುಜಿನಗಳು ಕಾಣಿಸಿಕೊಳ್ಳುತ್ತವೆ.
ಇಷ್ಟವಿಲ್ಲದವರ ಮೇಲೆ, ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ಬಣ್ಣ ಎರಚುವುದು ಯೋಗ್ಯವಲ್ಲ.
ನೀರು ತುಂಬಿದ ಬಲೂನುಗಳನ್ನು ದಾರಿಹೋಕರ ಮೇಲೆ ,ವಾಹನ ಸವಾರರ ಮೇಲೆ ಎಸೆಯುವುದೂ ಅಪಾಯಕಾರಿ.
ಕೇವಲ ಮನರಂಜನೆಗಾಗಿ ಆಟವಾಡದೇ ಸಮಾಜದ ಬಗ್ಗೆ, ಆರೋಗ್ಯದ ಬಗ್ಗೆ, ವಾತಾವರಣದ ಬಗ್ಗೆ ಎಚ್ಚರಿಕೆ ವಹಿಸಿ ಆಟವಾಡುವುದು ನಿಜವಾದ ಮನರಂಜನೆಯಾಗಿದೆ.
ಒಟ್ಟಾರೆ ಹೋಳಿ ಹುಣ್ಣಿಮೆ ಅಥವಾ ಹೋಳಿ ಹಬ್ಬ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ನೆನಪಿಸುವುದರ ಜೊತೆಗೆ ಭಾವೈಕ್ಯತೆಯ ಸಂಕೇತದ ಹಬ್ಬ.
ಸರ್ವರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಲೇಖಕಿ
ಚನ್ನಪಟ್ಟಣ

