ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಇರಾನ್ ದಕ್ಷಿಣ ಭಾಗದ ಪ್ರಮುಖ ಬಂದರು ನಗರಿ ಬಂದರ್ ಅಬ್ಬಾಸ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟ ಜನರಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ಅಮೆರಿಕ ಸೇನೆ ಸಮೀಪದ ಜಲಪ್ರದೇಶದಲ್ಲಿ ನಿಯೋಜನೆಗೊಂಡಿದೆ ಎಂಬ ವರದಿಗಳ ಹಿನ್ನೆಲೆ, ಈ ಘಟನೆ ಯುದ್ಧದ ಭೀತಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅನಿಲ ಸೋರಿಕೆಯಿಂದ ಈ ಸ್ಫೋಟ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಪ್ರಾಥಮಿಕವಾಗಿ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡಕ್ಕೆ ಭಾರೀ ಹಾನಿಯಾಗಿದ್ದು, ಒಬ್ಬರು ಮೃತಪಟ್ಟು ಕನಿಷ್ಠ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಂದರ್ ಅಬ್ಬಾಸ್ ಏಕೆ ಮಹತ್ವದದು?
ಬಂದರ್ ಅಬ್ಬಾಸ್ ಇರಾನ್‌ನ ಪ್ರಮುಖ ಕಂಟೇನರ್ ಮತ್ತು ವಾಣಿಜ್ಯ ಬಂದರು. ಇದು ಜಾಗತಿಕ ತೈಲ ಸಾಗಣೆಯಲ್ಲಿ ಅತಿ ಮಹತ್ವದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿ ಸಮೀಪದಲ್ಲಿದೆ. ಈ ಜಲಸಂಧಿ ಓಮನ್ ಮತ್ತು ಇರಾನ್ ನಡುವೆ ಇರುವ ಪ್ರಮುಖ ಸಮುದ್ರ ಮಾರ್ಗವಾಗಿದ್ದು, ವಿಶ್ವದ ಸಮುದ್ರ ಮಾರ್ಗದ ತೈಲ ಸಾಗಣೆಯ ದೊಡ್ಡ ಭಾಗ ಇಲ್ಲಿ ಸಾಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಸಂಭವಿಸುವ ಯಾವುದೇ ಅಸಾಮಾನ್ಯ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತದೆ.
ಯುದ್ಧ ಭೀತಿ ಮತ್ತು ಜನರ ಆತಂಕ
ಇತ್ತೀಚಿನ ದಿನಗಳಲ್ಲಿ ಇರಾನ್ ಅಮೆರಿಕ ನಡುವಿನ ಉದ್ವಿಗ್ನತೆ ಸುದ್ದಿಯಾಗಿರುವ ಸಂದರ್ಭದಲ್ಲಿ, ಸಮೀಪದ ಜಲಪ್ರದೇಶದಲ್ಲಿ ಅಮೆರಿಕದ ನೌಕಾಪಡೆ ಹಾಜರಿರುವುದಾಗಿ ವರದಿಗಳು ತಿಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಂದರ್ ಅಬ್ಬಾಸ್‌ನಲ್ಲಿ ಸಂಭವಿಸಿದ ಸ್ಫೋಟವನ್ನು ಸಾಮಾನ್ಯ ಅಪಘಾತವೆಂದು ತಿಳಿಸಿದರೂ, ಸ್ಥಳೀಯರಲ್ಲಿ ಅನುಮಾನ ಮತ್ತು ಭಯ ಹೆಚ್ಚಾಗಿದೆ.
ಕಳೆದ ವರ್ಷವೂ ಇದೇ ಭಾಗದಲ್ಲಿ ದೊಡ್ಡ ಸ್ಫೋಟ ಸಂಭವಿಸಿ ಹಾನಿ ಉಂಟಾಗಿತ್ತು ಎಂಬ ನೆನಪು ಇನ್ನೂ ಜನರಲ್ಲಿ ತಾಜಾ. ಇದೀಗ ಮತ್ತೆ ಇಂತಹ ಘಟನೆ ಸಂಭವಿಸಿರುವುದರಿಂದ, ಸಂಪೂರ್ಣ ತನಿಖೆ ಆರಂಭಿಸಲಾಗಿದೆ.
ಜಾಗತಿಕ ಗಮನ ಏಕೆ….?
ಹಾರ್ಮುಜ್ ಜಲಸಂಧಿ ಸಮೀಪದ ಈ ಬಂದರು ಪ್ರದೇಶದಲ್ಲಿ ಯಾವುದೇ ಘಟನೆ ನಡೆದರೂ, ಅದರ ಪ್ರಭಾವ ತೈಲ ವ್ಯಾಪಾರ, ಸಾಗಾಟ, ಮತ್ತು ಭದ್ರತಾ ರಾಜಕೀಯದ ಮೇಲೆ ಬೀಳಬಹುದು. ಅದಕ್ಕಾಗಿಯೇ ಈ ಸ್ಫೋಟದ ಕುರಿತು ಜಾಗತಿಕ ಮಟ್ಟದಲ್ಲಿ ಗಮನ ಹರಿಯುತ್ತಿದೆ.
ಪ್ರಾಥಮಿಕವಾಗಿ ಅನಿಲ ಸೋರಿಕೆಯಿಂದ ಸಂಭವಿಸಿದ ಅಪಘಾತವೆಂದು ತಿಳಿಸಲ್ಪಟ್ಟಿದ್ದರೂ, ಸ್ಥಳ ಮತ್ತು ಸಂದರ್ಭದ ಕಾರಣ ಈ ಸ್ಫೋಟ ಇರಾನ್ ಜನರಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಸಂಪೂರ್ಣ ತನಿಖೆಯ ನಂತರವೇ ನಿಖರ ಕಾರಣ ಬಹಿರಂಗವಾಗಲಿದೆ.

