ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಗೆಲುವು ರಾಜ್ಯದ ರಾಜಕೀಯದ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಇಂದು ಇಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವೇದಿಕೆ ಮುಂಭಾಗದಲ್ಲಿರುವ ನಿಷ್ಠಾವಂತ ಕಾರ್ಯಕರ್ತರೇ ನಮ್ಮ ದೊಡ್ಡ ಆಸ್ತಿ ಎಂಬುದನ್ನು ಮರೆಯದಿರಿ ಎಂದು ನುಡಿದರು. ನಿಷ್ಠಾವಂತ ಕಾರ್ಯಕರ್ತರಿಗೆ ಅವಮಾನ ಮಾಡುವುದನ್ನು ಬಿಟ್ಟು ನಾವೆಲ್ಲ ಒಂದಾಗಿ ಒಟ್ಟಾಗಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು. ಮುಂದಿನ ಉಪ ಚುನಾವಣೆಯ ಗೆಲುವಿಗೆ ಶ್ರಮಿಸುವಂತೆ ಕೋರಿದರು.
ದೇಶದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸುವ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು. 2014ರ ಪೂರ್ವದಲ್ಲಿ ಈ ದೇಶದ ಭ್ರಷ್ಟಾಚಾರ ತೊಲಗಿಸಲು ಸಾಧ್ಯವಿಲ್ಲ; ಈ ದೇಶದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ; ಈ ದೇಶಕ್ಕೆ ಭವಿಷ್ಯವೇ ಇಲ್ಲ ಎಂದು ಇಲ್ಲಿನ ಯುವಜನತೆ ಚಿಂತನೆ ಮಾಡುತ್ತಿದ್ದರು. 2014ರ ಚುನಾವಣೆ ನಂತರ ಭಾರತ ದೇಶಕ್ಕೂ ಭವಿಷ್ಯವಿದೆ; ಭ್ರಷ್ಟಾಚಾರರಹಿತ ಆಡಳಿತ ನಡೆಸಿ ಭಾರತವನ್ನು ಅಭಿವೃದ್ಧಿ ಮಾಡಲು ಸಾಧ್ಯ ಎಂಬುದನ್ನು ಮೋದಿಜೀ ಅವರು ಮತ್ತೆ ಮತ್ತೆ ಋಜುವಾತು ಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಅಧ್ಯಕ್ಷರಿಗೆ ಕೊಡುವ ಗೌರವ ರಾಜ್ಯಾಧ್ಯಕ್ಷರಿಗೆ ಸಲ್ಲುತ್ತದೆ. ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯಾಧ್ಯಕ್ಷರಿಗೆ ನೀಡುವ ಗೌರವವನ್ನು ಬೂತ್ ಅಧ್ಯಕ್ಷರಿಗೂ ಕೊಡಲಾಗುತ್ತದೆ. ಇದೇ ಬಿಜೆಪಿಯ ವಿಶೇಷತೆ ಎಂದು ವಿಶ್ಲೇಷಿಸಿದರು. ಇಂಥ ವಿಶಿಷ್ಟತೆಯನ್ನು ಬೇರೆ ಪಕ್ಷದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಅವರು, ಒಬ್ಬ ಚಹಾ ಮಾರುವ ಸಾಮಾನ್ಯ ಕಾರ್ಯಕರ್ತನೂ ದೇಶದ ಪ್ರಧಾನಿ ಆಗಬಹುದು ಎಂಬುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ತಿಳಿಸಿದರು.
ಮೋದಿಜೀ ಅವರು ಒಂದು ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ; ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಅವರು ದುಡಿದವರು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿದ ಅವರು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ, ಅದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಹೇಳಿದರು.
ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಗಳಾದ ರಾಧಾಮೋಹನ್ ದಾಸ್ ಅಗ್ರವಾಲ್ ಅವರು ತಮ್ಮ ಒತ್ತಡದ ನಡುವೆ ದೆಹಲಿಯಿಂದ ಹುಬ್ಬಳ್ಳಿಗೆ ಬಂದು ಇಲ್ಲಿಗೆ ಬಂದವರೇ ಕೆಲವು ಮುಖಂಡರನ್ನು ಮಾತನಾಡಿಸಿದ್ದಾರೆ ಎಂದ ಅವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ತಿಳಿಸಿದರು. ಉಪ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಬೆಲೆ ಏರಿಕೆಯ ಆರನೇ ಗ್ಯಾರಂಟಿ
ಹೈನುಗಾರಿಕೆಗೆ ಬಿಜೆಪಿ ಸರಕಾರ ಪ್ರೋತ್ಸಾಹ ಕೊಟ್ಟಿತ್ತು. ಆದರೆ, ಸಿದ್ದರಾಮಯ್ಯನವರ ಸರಕಾರವು ಹೈನುಗಾರರ 1 ಸಾವಿರ ಕೋಟಿಗೂ ಹೆಚ್ಚು ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರ ಸರಕಾರವು ಪಂಚ ಗ್ಯಾರಂಟಿ ಜೊತೆಗೇ ಇದೀಗ ಬೆಲೆ ಏರಿಕೆಯ ಆರನೇ ಗ್ಯಾರಂಟಿಯನ್ನೂ ನೀಡಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ಗೆಲುವಿಗೆ ಶ್ರಮಿಸಿ- ರಾಧಾಮೋಹನ್ ದಾಸ್ ಅಗ್ರವಾಲ್
ಬಿಜೆಪಿ ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಮಾತನಾಡಿ, ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದರೆ 2028ರಲ್ಲಿ ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮುಖಂಡರೂ ಬೂತ್‍ನಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಸೂಚಿಸಿದರು.
ವೇದಿಕೆಯಲ್ಲಿರುವ ಎಲ್ಲ ಮುಖಂಡರು ಶಕ್ತಿ ಕೇಂದ್ರ, ಸೆಕ್ಟರ್ ಕೇಂದ್ರಕ್ಕೆ ತೆರಳಿ ಪಕ್ಷದ ಗೆಲುವಿಗೆ ಶ್ರಮ ಹಾಕಬೇಕು ಎಂದರು. ಇದೇವೇಳೆ ಅವರು ಕಾರ್ಯಕರ್ತರಿಗೆ ಜಿಂದಾಬಾದ್, ಬೂತ್ ಮುಖಂಡರಿಗೆ ಜಿಂದಾಬಾದ್ ಕೂಗಿಸಿದರು. ರಾಜ್ಯ- ಜಿಲ್ಲೆ- ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
