ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ, ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದೆ, ಕಲಾಕಸ್ತೂರಿ ಡಾ. ಮೀರಾ ಕುಮಾರ್ ಅವರು ಕರ್ನಾಟಕದ ಕಲಾಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಪ್ರತಿಭಾವಂತ ಚಿತ್ರಕಲಾವಿದೆ. ಸಾಂಪ್ರದಾಯಿಕ ಭಾರತೀಯ ಕಲೆಯ ಸೊಗಡನ್ನು ಉಳಿಸಿಕೊಂಡು ಅದಕ್ಕೆ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ತಮ್ಮದೇ ಆದ ಕಲಾಶೈಲಿಯನ್ನು ರೂಪಿಸಿಕೊಂಡಿದ್ದಾರೆ.

ಬಾಲ್ಯ ಮತ್ತು ಕಲೆಯತ್ತ ಆಸಕ್ತಿ
ಬೆಂಗಳೂರು ನಗರದಲ್ಲಿ ಜನಿಸಿದ ಡಾ.ಮೀರಾ ಕುಮಾರ್ ಅವರು ಮೈಸೂರು ಹಾಗೂ ಮಲೆನಾಡಿನ ಪ್ರಕೃತಿ ಸೊಬಗಿನ ಮಧ್ಯೆ ಬೆಳೆದರು. ಬಾಲ್ಯದಲ್ಲಿಯೇ ಪ್ರಕೃತಿಯ ವೈವಿಧ್ಯಮಯ ರೂಪಗಳು,ಮನೆಯಂಗಳದ ರಂಗೋಲಿ, ದೇವಾಲಯಗಳ ಶಿಲ್ಪಕಲೆ ಮತ್ತು ಸಾಂಸ್ಕೃತಿಕ ವಾತಾವರಣ ಇವರ ಮನಸ್ಸಿನಲ್ಲಿ ಕಲೆಯ ಬೀಜ ಬಿತ್ತಿದವು. ಮೈಸೂರಿನ ಪ್ರಸಿದ್ಧ ಕಲಾಮಂದಿರದ ದಿವಂಗತ ಆ.ನ. ಸುಬ್ಬರಾಯ ಹಾಗೂ ಗೋವಿಂದರಾಜು ಅವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಚಿತ್ರಕಲೆಯಲ್ಲಿ ತಮ್ಮದೇ ಆದ ಸಾಧನೆಯ ಹಾದಿಯನ್ನು ಆರಂಭಿಸಿದರು.
ಆರಂಭದಲ್ಲಿ ಹವ್ಯಾಸವಾಗಿ ಚಿತ್ರಕಲೆಯನ್ನು ಅಭ್ಯಾಸಿಸಿದ ಅವರು ನಂತರ ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ವೃತ್ತಿಪರ ಕಲಾವಿದೆಯಾಗಿ ರೂಪುಗೊಂಡರು. ಅವರ ಕಲಾಕೃತಿಗಳಲ್ಲಿ ಆಧ್ಯಾತ್ಮಿಕತೆ, ಭಾರತೀಯ ಸಂಸ್ಕೃತಿ, ಪೌರಾಣಿಕ ಕಥೆಗಳು ಮತ್ತು ಸಾಂಪ್ರದಾಯಿಕ ಮೌಲ್ಯಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

*ಸಾಂಪ್ರದಾಯಿಕ ಚಿತ್ರಕಲೆಯ ಅಪರೂಪದ ಸಾಧಕಿ*
ಡಾ. ಮೀರಾ ಕುಮಾರ್ ಅವರು ವಿಶೇಷವಾಗಿ ಮೈಸೂರು ಸಾಂಪ್ರದಾಯಿಕ ಚಿತ್ರಕಲೆ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಪಾಶ್ಚಾತ್ಯ ಕಲಾಶೈಲಿಯ ಪ್ರಭಾವ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿಯೂ ಭಾರತೀಯ ಸಂಪ್ರದಾಯದ ಬೇರುಗಳನ್ನು ಹಿಡಿದುಕೊಂಡು ಹೊಸತನದ ಅನ್ವೇಷಣೆಯಲ್ಲಿ ತೊಡಗಿದ್ದಾರೆ.
ಅವರ ಕಲಾಕೃತಿಗಳು ಕೇವಲ
ಅಲಂಕಾರಿಕ ಚಿತ್ರಗಳಲ್ಲ; ಅವುಗಳಲ್ಲಿ ಭಾರತೀಯ ತತ್ವಶಾಸ್ತ್ರ, ಆಧ್ಯಾತ್ಮಿಕ ಚಿಂತನೆ, ದೇವತಾ ಸ್ವರೂಪಗಳು ಮತ್ತು ಸಾಂಸ್ಕೃತಿಕ ಪರಂಪರೆ ಜೀವಂತವಾಗಿ ಮೂಡಿಬರುತ್ತವೆ. ಅವರ ಮನೆಯಲ್ಲಿ ನಿರ್ಮಿಸಿರುವ ಖಾಸಗಿ ಕಲಾ ಗ್ಯಾಲರಿ ಅವರ ಕಲಾಸಾಧನೆಯ ಪ್ರತಿಬಿಂಬವಾಗಿದೆ.

*ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ*
ಡಾ. ಮೀರಾ ಕುಮಾರ್ ಅವರು ರಚಿಸಿರುವ ಚಿತ್ರಗಳು ಸುಮಾರು 40 ರಿಂದ 50ಕ್ಕೂ ಹೆಚ್ಚು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಸ್ತಕಗಳ ಮುಖಪುಟಗಳಲ್ಲಿ ಪ್ರಕಟಗೊಂಡಿವೆ.
ಅವುಗಳಲ್ಲಿ ಪ್ರಮುಖವಾದವು:
ಕೆ.ಪಿ.ರತ್ನಾಕರ ಭಟ್ಟರವರ ಶ್ರೀ ಗೀತಾಂತರಂಗ (ಶ್ರೀಮದ್ಭಗವದ್ಗೀತೆ) ಕೃತಿಯ 18 ಅಧ್ಯಾಯಗಳಿಗೆ 18 ವಿಶೇಷ ಚಿತ್ರಗಳ ರಚನೆ.



ಗಣಪತಿಖಂಡಃ ಪುಸ್ತಕದ ಮುಖಪುಟ ಚಿತ್ರ.
ಶ್ರೀ ಲಲಿತಾ ಸಹಸ್ರನಾಮ ಭಾಷ್ಯಂ ಕೃತಿಯ ರಾಜರಾಜೇಶ್ವರಿ ಚಿತ್ರ.
ಅನೇಕ ಆಧ್ಯಾತ್ಮಿಕ ಗ್ರಂಥಗಳ ಮುಖಪುಟ ಹಾಗೂ ಒಳಚಿತ್ರಗಳ ರಚನೆ.ವಿಗ್ರ ವಿನ್ಯಾಸ,ಆಧುನಿಕ ಶೈಲಿಯಲ್ಲಿ ಚಿತ್ರ ರಚನೆ,ಭೂದೃಶ್ಯ ರಚನೆ, ಭಾವಚಿತ್ರಗಳ ರಚನೆ

*ದೇಶ-ವಿದೇಶಗಳಲ್ಲಿ ಕಲಾಕೃತಿಗಳ ಸಂಗ್ರಹ*
ಡಾ. ಮೀರಾ ಕುಮಾರ್ ಅವರ ಕಲಾಕೃತಿಗಳು ಭಾರತದ ಜೊತೆಗೆ ಅಮೆರಿಕಾದ 32 ರಾಜ್ಯಗಳು, ಜರ್ಮನಿ, ಜಪಾನ್, ಸಿಂಗಾಪುರ ಸೇರಿದಂತೆ ಅನೇಕ ರಾಷ್ಟ್ರಗಳ ಕಲಾಭಿಮಾನಿಗಳ ಮನೆಗಳು, ಗ್ಯಾಲರಿಗಳು ಮತ್ತು ಸಂಸ್ಥೆಗಳಲ್ಲಿ ಸಂಗ್ರಹಗೊಂಡಿವೆ. ಇನ್ಫೋಸಿಸ್ ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪನಿಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಅವರ ಕಲಾಕೃತಿಗಳನ್ನು ಸಂಗ್ರಹಿಸಿವೆ.

*ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳು*
ಅವರು ಮೈಸೂರು ದಸರಾ ಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರದರ್ಶನ, ಅಖಿಲ ಭಾರತ ಕಲಾಮೇಳ, ಚಿತ್ತಾರ ಸಂತೇ, ಬೆಂಗಳೂರು ಹಬ್ಬ ಸೇರಿದಂತೆ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
*ಅಂತರರಾಷ್ಟ್ರೀಯ ಮಟ್ಟದಲ್ಲಿ* :
ಸಿಂಗಾಪುರ್ ಆರ್ಟ್ ಫೋಕಸ್, ಕ್ರಾಕ್ಸ್ ಇಂಟರ್ನ್ಯಾಷನಲ್ ಎಕ್ಸಿಬಿಷನ್,
Singapore Art Focus
ಸೆಲೆಬ್ರೇಶನ್ ಆಫ್ ಇಂಡಿಯನ್ ಆರ್ಟ್,
ಫೀನಿಕ್ಸ್ ಇಂಟರ್ನ್ಯಾಷನಲ್ ಆರ್ಟ್ ಎಕ್ಸಿಬಿಷನ್, ಕೈಟ್ಸ್ ಇಂಟರ್ನ್ಯಾಷನಲ್ ಎಕ್ಸಿಬಿಷನ್, ಆರ್ಟ್ ಸ್ಪೆಕ್ಟ್ರ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಹೀಗೆ ಹಲವಾರು ಪ್ರದರ್ಶನಗಳಲ್ಲಿ ಭಾಗವಹಿಸಿ ಭಾರತೀಯ ಕಲೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ್ದಾರೆ.

*ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸಗಳು*
ಕಲೆಯ ಆಳವಾದ ಅಧ್ಯಯನಕ್ಕಾಗಿ ವಿಶ್ವದ ಪ್ರಸಿದ್ಧ ಕಲಾ ಸಂಗ್ರಹಾಲಯಗಳಿಗೆ ಭೇಟಿ ನೀಡಿದ್ದಾರೆ.
ಅವುಗಳಲ್ಲಿ ಪ್ರಮುಖವಾದವು:
ಲೋರ್ವೆ ಆರ್ಟ್ ಮ್ಯೂಸಿಯಂ ಪ್ಯಾರಿಸ್, ಮಾಡ್ರನ್ ಆರ್ಡ್ ಗ್ಯಾಲರಿ ಪ್ಯಾರಿಸ್, ನ್ಯಾಷನಲ್ ಆರ್ಟ್ ಗ್ಯಾಲರಿ ಲಂಡನ್, ರಿಜ್ಕ್ಸ್ ಮ್ಯೂಸಿಯಂ ಆಂಸ್ಟರ್ಡ್ಯಾಮ್, ವಿನ್ಸೆಂಟ್ ವ್ಯಾನ್ ಗೋಗ ಮ್ಯೂಸಿಯಂ ಆಂಸ್ಟರ್ಡ್ಯಾಮ್ , ಫೈಂಡ್ ಆರ್ಟ್ಸ್ ಮ್ಯೂಸಿಯಂ ವಿಯನ್ನ ಆಸ್ಟ್ರಿಯಾ,ಈ ಪ್ರವಾಸಗಳು ಅವರ ಕಲಾ ದೃಷ್ಟಿಕೋನವನ್ನು ಇನ್ನಷ್ಟು ವಿಸ್ತರಿಸಿವೆ.

*ಪ್ರಶಸ್ತಿಗಳು ಮತ್ತು ಗೌರವಗಳು*
ಡಾ.ಮೀರಾ ಕುಮಾರ್ ಅವರ ಕಲಾಸೇವೆಯನ್ನು ಗುರುತಿಸಿ 50ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ ಅನೇಕ ಗೌರವ ಸನ್ಮಾನಗಳು ಲಭಿಸಿವೆ.
ಪ್ರಮುಖ ಪ್ರಶಸ್ತಿಗಳು:
ಕಲಾಕಸ್ತೂರಿ ಪ್ರಶಸ್ತಿ (2002)
ರಾಜೀವ್ ಗಾಂಧಿ ಏಕತಾ ರಾಷ್ಟ್ರೀಯ ಪ್ರಶಸ್ತಿ (2008)
ಆರ್ಡರ್ ಆಫ್ ಆರ್ಟಿಸ್ಟಿಕ್ ಮೆರಿಟ್ ಅಮೆರಿಕನ್ ಬಯೋಗ್ರಾಫಿಕಲ್ ಇನ್ಸ್ಟಿಟ್ಯೂಟ್ USA (2008),
ಡಾ. ಕೆ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ (2009)
ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ (2010)
ಕೆಂಪೇಗೌಡ ಪ್ರಶಸ್ತಿ (2011)
ಕುಂದ ಶ್ರೀ ಕಲಾ ಕಾಮಧೇನು ಪ್ರಶಸ್ತಿ (2013)
ಗೌರವ ಡಾಕ್ಟರೇಟ್ (Doctor of Art) – 2013
ಭಾರತ ರತ್ನ ಡಾ.ಎ.ಪಿ.ಜೆ. ಕಲಾಂ ರಾಷ್ಟ್ರೀಯ ಪ್ರಶಸ್ತಿ (2015)
ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ (2016)
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ (2018)
ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (2020)
ಹೆಮ್ಮೆಯ ಕನ್ನಡಿಗ ಪ್ರಶಸ್ತಿ (2023)
ಈ ನಾಡ ರತ್ನ ಪ್ರಶಸ್ತಿ (2023)
ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ (2024)
ಭಾರತ ಭೂಷಣ ರಾಷ್ಟ್ರಮಟ್ಟದ ಪ್ರಶಸ್ತಿ (2024)
ಕರುನಾಡ ನಿಧಿ ಪ್ರಶಸ್ತಿ (2025)
ಜಿ-20 ಶೃಂಗಸಭೆಯಲ್ಲಿ ವಿಶೇಷ ಗೌರವ
2021-22ರಲ್ಲಿ ಬೆಂಗಳೂರಿನಲ್ಲಿ ನಡೆದ ಜಿ-20 ಶೃಂಗಸಭೆ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಅಕಾಡೆಮಿಯ ಕೋರಿಕೆಯ ಮೇರೆಗೆ ಡಾ.ಮೀರಾ ಕುಮಾರ್ ಅವರ 21 ಆಯ್ದ ಸಾಂಪ್ರದಾಯಿಕ ಕಲಾಕೃತಿಗಳ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಇದು ಅವರ ಕಲಾಸಾಧನೆಗೆ ದೊರೆತ ಮಹತ್ವದ ಗೌರವವಾಗಿದೆ.

*ಮಾಧ್ಯಮಗಳಲ್ಲಿ ಗುರುತಿಸಿಕೊಂಡ ಸಾಧಕಿ*
ಅವರ ಸಾಧನೆಗಳನ್ನು ಅನೇಕ ಟಿವಿ ವಾಹಿನಿಗಳು ಮತ್ತು ಪತ್ರಿಕೆಗಳು ಪರಿಚಯಿಸಿವೆ.
ಪ್ರಮುಖ ಕಾರ್ಯಕ್ರಮಗಳು:
ಚಂದನ ಟಿವಿ – “ಬೆಳಗು”
ಉದಯ ಟಿವಿ – “ಸಂವೇದನೆ”
ಸುವರ್ಣ ಟಿವಿ – “ಹೇಳೇ ಗೆಳತಿ”
ಸಮಯ ಟಿವಿ – “ಕಲೆ ಮತ್ತು ಬದುಕು”
ವಿ3 ಟಿವಿ
ದಸರಾ ವೈಭವ
ಹಾಗೂ ಸುಧಾ, ತರಂಗ, ಉದಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಮಂಗಳ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಅವರ ಸಂದರ್ಶನಗಳು ಹಾಗೂ ಕಲಾಕೃತಿಗಳು ಪ್ರಕಟಗೊಂಡಿವೆ.
ಕಲಾ ಗುರುವಾಗಿ ಸೇವೆ
ಡಾ. ಮೀರಾ ಕುಮಾರ್ ಅವರು ಕೇವಲ ಕಲಾವಿದೆಯಲ್ಲ, ಅತ್ಯುತ್ತಮ ಕಲಾ ಶಿಕ್ಷಕಿಯೂ ಹೌದು. ಅವರ ಬಳಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಯುವ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಾ ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ.
ಕುಟುಂಬ
ಅವರ ಪತಿ ಶ್ರೀ ವಸಂತಕುಮಾರ್ ಹಾಗೂ ಮಕ್ಕಳು ವಿನಯ್, ವಿಕ್ರಮ್ ಮತ್ತು ಶಾಲಿನಿ ಅವರ ಕಲಾ ಚಟುವಟಿಕೆಗಳಿಗೆ ಸದಾ ಬೆಂಬಲ ಮತ್ತು ಪ್ರೇರಣೆಯಾಗಿದ್ದಾರೆ.

ಸಾಂಪ್ರದಾಯಿಕ ಭಾರತೀಯ ಚಿತ್ರಕಲೆಯ ಶ್ರೀಮಂತ ಪರಂಪರೆಯನ್ನು ಆಧುನಿಕ ಜಗತ್ತಿನ ಮುಂದೆ ಅತ್ಯಂತ ಸೊಗಸಾಗಿ ಪರಿಚಯಿಸಿರುವ ಕಲಾತಪಸ್ವಿನಿ ಡಾ. ಮೀರಾ ಕುಮಾರ್ ಅವರು ಕನ್ನಡ ನಾಡಿನ ಹೆಮ್ಮೆ. ಅವರ ಕಲಾಕೃತಿಗಳು ಭಾರತೀಯ ಸಂಸ್ಕೃತಿಯ ದಿವ್ಯತೆಯನ್ನು ಪ್ರತಿಬಿಂಬಿಸುವ ಅಮೂಲ್ಯ ಸಂಪತ್ತು. ಕಲೆಯನ್ನು ಆರಾಧನೆಯಾಗಿ, ಜೀವನದ ಸಾಧನೆಯಾಗಿ ರೂಪಿಸಿಕೊಂಡಿರುವ ಅವರು ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಶಾಶ್ವತ ರಾಯಭಾರಿಯಾಗಿದ್ದಾರೆ.







