ಬೆಂಗಳೂರು: ಮುಂದಿನ 2028ರ ವಿಧಾನಸಭೆ ಚುನಾವಣೆಯನ್ನು ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಎದುರಿಸಿ ಅಭೂತಪೂರ್ವ ಗೆಲುವು ಸಾಧಿಸಲು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಕರೆ ನೀಡಿದ್ದಾರೆ.
ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸುವಲ್ಲಿ ವಿಧಾನ ಮಂಡಲದಲ್ಲಿ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಪ್ರಶಂಸಿಸಿದರು. ವಿಧಾನಸಭೆಯ ಒಳಗೆ ಪರಿಣಾಮಕಾರಿ ಧ್ವನಿಯಾಗಿರುವ ಈ ನಾಯಕರ ಜೊತೆಗೆ, ವಿಧಾನಸಭೆಯ ಹೊರಗೆ ವಿಜಯೇಂದ್ರ ಅವರು ರಾಜ್ಯದಾದ್ಯಂತ ಹೋರಾಟ ನಡೆಸುತ್ತಿರುವುದು ಗಮನಾರ್ಹ ಎಂದು ಹೇಳಿದರು.
“ಮುಂದಿನ ವಿಧಾನಸಭೆ ಚುನಾವಣೆಯನ್ನು ವಿಜಯೇಂದ್ರ ತಂಡದ ನೇತೃತ್ವದಲ್ಲಿ ಎದುರಿಸಿ ಗೆಲುವು ಸಾಧಿಸಲಾಗುವುದು. ಪಕ್ಷದ ಎಲ್ಲಾ ಕಾರ್ಯಕರ್ತರು ಸಣ್ಣ ಹಾಗೂ ದೊಡ್ಡ ಕಾರ್ಯಕ್ರಮಗಳ ಮೂಲಕ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಬೇಕು,” ಎಂದು ಅವರು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮುಸ್ಲಿಂ ಓಲೈಕೆ ಹಾಗೂ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡಬೇಕು. ಜನಾಭಿಪ್ರಾಯವನ್ನು ಬಿಜೆಪಿ ಪರವಾಗಿ ರೂಪಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಪಕ್ಷದ ಭವಿಷ್ಯ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದ್ದು, 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಂಘಟನೆ ಬಲಪಡಿಸುವುದಕ್ಕೆ ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.






