ಬೆಂಗಳೂರು, ಫೆ.24:ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಕದಳಿ ಮಹಿಳಾ ವೇದಿಕೆ, ಬೆಂಗಳೂರು ಹಾಗೂ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ಕದಳಿ ಪ್ರಶಸ್ತಿ ಪ್ರದಾನ ಸಮಾರಂಭ ಭವ್ಯವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ ಎಸ್.ಬಿ. ಸುಶೀಲಮ್ಮ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಸಮಾರಂಭಕ್ಕೆ ನಗರದ ಗಣ್ಯರು, ಸಾಹಿತ್ಯಾಸಕ್ತರು, ಮಹಿಳಾ ವೇದಿಕೆಯ ಸದಸ್ಯರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಾಕ್ಷಿಯಾದರು.ದಿವ್ಯ ಸಾನ್ನಿಧ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸುತ್ತೂರು ಶ್ರೀಕ್ಷೇತ್ರ, ಅವರು ಆಗಮಿಸಿ ಪ್ರಶಸ್ತಿ ಪುರಸ್ಕೃತರನ್ನು ಆಶೀರ್ವದಿಸಿದರು, ಡಾ.ಗೊ.ರು. ಚನ್ನಬಸಪ್ಪ ಹಿರಿಯ ವಿದ್ವಾಂಸರು ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಈ ಸಂದರ್ಭದಲ್ಲಿ ಕದಳಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಗೀತಾ ಮಹದೇವ ಪ್ರಸಾದ್ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಪದ್ಮಶ್ರೀ ಪುರಸ್ಕೃತೆ ಶ್ರೀಮತಿ ಎಸ್.ಜಿ. ಸುಶೀಲಮ್ಮ ಹಾಗೂ ಶ್ರೀಮತಿ ಪ್ರಮೀಳಾ ಗರಡಿ ಅವರ ಸಾನ್ನಿಧ್ಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಮಹಾಲಕ್ಷ್ಮೀ ಎನ್.ಎಸ್ ಅವರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಗರಡಿ ವಹಿಸಿದ್ದರು. ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜಮೂರ್ತಿ ಅವರು ಸಾಹಿತ್ಯ, ಸಂಸ್ಕೃತಿ ಹಾಗೂ ಮಹಿಳಾ ಸಬಲೀಕರಣದ ಮಹತ್ವವನ್ನು ತಮ್ಮ ಭಾಷಣದಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರರಾದ ಸುನೀಲ್ ಶಾಸ್ತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ತಮ್ಮ ಮಾತಿನಲ್ಲಿ ಅವರು ಶರಣ ಸಾಹಿತ್ಯದ ಪರಂಪರೆ ಮತ್ತು ಮಹಿಳೆಯರ ಪಾತ್ರದ ಮಹತ್ವವನ್ನು ಉಲ್ಲೇಖಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭವು ಸಾರ್ಥಕವಾಗಿ ನೆರವೇರಿದ್ದು, ಕದಳಿ ಪ್ರಶಸ್ತಿ ಸಮಾಜಮುಖಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಪ್ರೇರಣೆಯಾದಂತೆ ಆಯಿತು.





