ಬೆಂಗಳೂರು: ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದಿಂದ ಸಂಗೀತ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಸುಮಾರು ಐದು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಕೋಟ್ಯಂತರ ಸಂಗೀತಾಭಿಮಾನಿಗಳ ಮನಗೆದ್ದಿದ್ದ ಎಸ್.ಜಾನಕಿ ಅವರ ಅಗಲಿಕೆಗೆ ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗದ ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಜಾನಕಿ ಅವರ ನಿಧನವನ್ನು ಸ್ಮರಿಸಿ, ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಸಂತಾಪ ಸಂದೇಶದಲ್ಲಿ, “ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಖ್ಯಾತಿಯ ಬಹುಭಾಷಾ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ.
ಕನ್ನಡ ಭಾಷೆ ಇರುವ ತನಕ ಎಸ್. ಜಾನಕಿ ಅವರ ಹಾಡುಗಳು ಅಜರಾಮರ. ಅವರ ದನಿಯಲ್ಲಿ ಕನ್ನಡ ಹಾಡುಗಳನ್ನು ಕೇಳಿ ಬೆಳೆದವರು ನಾವು. ಕನ್ನಡದ ಸೊಬಗಿಗೆ ಮಾಧುರ್ಯ ತುಂಬಿದವರು ಅವರು,” ಎಂದು ತಿಳಿಸಿದ್ದಾರೆ.
ಮುಂದುವರಿದು, “ಸರಳತೆಯ ಸಾಕಾರಮೂರ್ತಿಯಾಗಿದ್ದ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಎಂದೆಂದಿಗೂ ಅಮರವಾಗಿರಲಿದೆ.
ಅವರು ಮೂಲತಃ ಆಂಧ್ರಪ್ರದೇಶದವರಾದರೂ ಕನ್ನಡದ ಮೇಲಿನ ಅಪಾರ ಅಭಿಮಾನದಿಂದ ಮೈಸೂರಿನಲ್ಲಿ ನೆಲೆಸಿದ್ದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿರುವ ಅವರ ಸಾಧನೆ ಭಾರತೀಯ ಸಂಗೀತ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರಲಿದೆ. ಜಾನಕಮ್ಮನವರ ನಿಧನದಿಂದ ಸಂಗೀತ ಲೋಕದ ಅಮೂಲ್ಯ ಸ್ವರ ಮೌನವಾಗಿದೆ,” ಎಂದು ಭಾವುಕರಾಗಿ ನುಡಿದಿದ್ದಾರೆ.
ಎಸ್. ಜಾನಕಿ ಅವರು ತಮ್ಮ ವಿಶಿಷ್ಟ ಗಾಯನ ಶೈಲಿ, ಭಾವಪೂರ್ಣ ಕಂಠ ಮತ್ತು ಬಹುಭಾಷಾ ಪ್ರತಿಭೆಯ ಮೂಲಕ ಹಲವು ತಲೆಮಾರುಗಳ ಸಂಗೀತಪ್ರಿಯರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ಸಾವಿರಾರು ಅಮರಗೀತೆಗಳನ್ನು ನೀಡಿರುವ ಅವರು ಭಾರತೀಯ ಸಂಗೀತ ಕ್ಷೇತ್ರದ ಶಾಶ್ವತ ದಂತಕಥೆಯಾಗಿ ಉಳಿಯಲಿದ್ದಾರೆ.
ಅವರ ನಿಧನಕ್ಕೆ ದೇಶದಾದ್ಯಂತ ಸಂಗೀತಾಭಿಮಾನಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ.






