ಬೆಂಗಳೂರು:ದಿ12; ನಗರದ ಹೃದಯ ಭಾಗದಲ್ಲಿ ದಶಕಗಳ ಸೇವಾ ಪರಂಪರೆಯನ್ನು ಹೊತ್ತು ಸಾಗುತ್ತಿರುವ ಮಲಬಾರ್ ಮುಸ್ಲಿಂ ಅಸೋಸಿಯೇಷನ್ ತನ್ನ ಸಮರ್ಪಿತ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಮತ್ತೊಮ್ಮೆ ಜನಮನ ಸೆಳೆಯಲು ಸಜ್ಜಾಗಿದೆ.
1934-35ರ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬೆಂಗಳೂರಿನ ಪ್ರವಾಸಿ ಮಲಯಾಳಿಗಳಿಂದ ಸ್ಥಾಪಿಸಲ್ಪಟ್ಟ ಈ ಸಂಘಟನೆ, ಒಂದು ಅನಾಥ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವ ಸಂದರ್ಭದಿಂದ ಪ್ರೇರಿತವಾಗಿ ಹುಟ್ಟಿಕೊಂಡಿತು. “ಯಾರೂ ಅನಾಥರಾಗಬಾರದು” ಎಂಬ ಮಾನವೀಯ ಮೌಲ್ಯವೇ ಸಂಘಟನೆಯ ಮೂಲ ತತ್ವವಾಗಿ ರೂಪುಗೊಂಡಿತು. 1935ರಲ್ಲಿ ಮೈಸೂರು ಸ್ಟೇಟ್ ಸೊಸೈಟೀಸ್ ಕಾಯ್ದೆಯಡಿ ನೋಂದಾಯಿತವಾದ ಎಂ.ಎಂ.ಎ., ಸ್ವಾತಂತ್ರ್ಯ ಪೂರ್ವ ಭಾರತದ ಪ್ರಾರಂಭಿಕ ಪ್ರವಾಸಿ ಸಂಘಟನೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರಂಭಿಕ ದಿನಗಳಲ್ಲಿ ಆರ್ಥಿಕ ಮಿತಿಗಳ ನಡುವೆಯೇ ಸೇವಾ ಕಾರ್ಯಗಳನ್ನು ಮುಂದುವರಿಸಿದ ಎಂ.ಎಂ.ಎ. 1990ರ ನಂತರ ಡಾ. ಎನ್. ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎ.ಬಿ. ಖಾದರ್ ಹಾಜಿ ಅವರ ಪ್ರಧಾನ ಕಾರ್ಯದರ್ಶಿತ್ವದಲ್ಲಿ ಹೊಸ ಚೈತನ್ಯವನ್ನು ಪಡೆದಿತು. ಅವರ ನಿಧನದ ಬಳಿಕ ಟಿ.ಸಿ.ಸಿರಾಜ್ ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ಹೊತ್ತು ಸಂಘಟನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದರು.
ಅಂತ್ಯಕ್ರಿಯೆ ಸೇವೆಯಿಂದ ಆರಂಭವಾದ ಸೇವಾ ಪಯಣ ಇಂದು ಶಿಕ್ಷಣ, ದಾನಧರ್ಮ, ಗೃಹ ನಿರ್ಮಾಣ ಮತ್ತು ಆರೋಗ್ಯ ಕ್ಷೇತ್ರಗಳವರೆಗೆ ವಿಸ್ತರಿಸಿದೆ. ಮೊತಿನಗರದಲ್ಲಿರುವ ಕೇಂದ್ರ ಕಚೇರಿ ಹಾಗೂ ವಿವಿಧ ಮಸೀದಿಗಳು ಮತ್ತು ಮದ್ರಸಾಗಳು ಸಂಘಟನೆಯ ಆಡಳಿತದಲ್ಲಿವೆ. ರಂಜಾನ್ ತಿಂಗಳಲ್ಲಿ ಸಮೂಹ ಇಫ್ತಾರ್ ಹಾಗೂ ವಸತಿ ಸೌಲಭ್ಯಗಳು ವಿಶೇಷ ಸೇವೆಗಳಾಗಿ ಗುರುತಿಸಿಕೊಂಡಿವೆ.
1994ರಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಇಂದು ಎಲ್.ಕೆ.ಜಿ.ದಿಂದ ಪಿಯುಸಿ ತನಕ ಸುಮಾರು 1,600 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಕೋವಿಡ್ ಮಹಾಮಾರಿಯ ಸಮಯದಲ್ಲಿ ಒಂದು ವರ್ಷದ ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಸಂಘಟನೆ ಮಾದರಿಯಾಯಿತು.
ದಾನಧರ್ಮ ಕ್ಷೇತ್ರದಲ್ಲಿ ಪ್ರತಿವರ್ಷ ಸುಮಾರು 2,000 ಕುಟುಂಬಗಳಿಗೆ ರಂಜಾನ್ ಕಿಟ್ಗಳನ್ನು ವಿತರಿಸಲಾಗುತ್ತಿದೆ. ವೈದ್ಯಕೀಯ ನೆರವು, ವಿವಾಹ ಹಾಗೂ ಶಿಕ್ಷಣ ಸಹಾಯಧನ, ಸ್ವಯಂ ಉದ್ಯೋಗ ಯೋಜನೆಗಳಡಿ ಆಟೋ ರಿಕ್ಷಾಗಳು ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. 2018ರಲ್ಲಿ ಆರಂಭವಾದ ಎಂ.ಎಂ.ಎ. ಚಾರಿಟಿ ಹೋಮ್ ಯೋಜನೆಯಡಿ ಅನೇಕ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ನೀಡಲಾಗಿದೆ. ನೀಲಸಂದ್ರದಲ್ಲಿ 27 ಮನೆಗಳ ಸಮೂಹ ವಿತರಣೆಗಾಗಿ ಸಿದ್ಧತೆ ನಡೆಯುತ್ತಿದೆ.
ಕರ್ನಾಟಕ ಮಲಬಾರ್ ಸೆಂಟರ್ 24 ಗಂಟೆಗಳ ಸೇವೆಯೊಂದಿಗೆ ವಿದ್ಯಾರ್ಥಿ ಮಾರ್ಗದರ್ಶನ, ಕೌನ್ಸೆಲಿಂಗ್, ವೈದ್ಯಕೀಯ ಶಿಬಿರಗಳು ಹಾಗೂ ಕುಟುಂಬ ಸಮಸ್ಯೆಗಳ ಪರಿಹಾರ ಸೇವೆಗಳನ್ನು ಒದಗಿಸುತ್ತಿದೆ. ಸಂಘಟನೆಯ ಏಳು ಶಾಖೆಗಳು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿವೆ.
ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಎಂ.ಎಂ.ಎ., ತನ್ನ ಮಹತ್ವದ ವಾರ್ಷಿಕೋತ್ಸವವನ್ನು ಆಚರಿಸುವ ಜೊತೆಗೆ 60 ವರ್ಷಗಳ ಸಾರ್ವಜನಿಕ ಸೇವೆ ಪೂರ್ಣಗೊಳಿಸಿರುವ ಅಧ್ಯಕ್ಷ ಡಾ. ಎನ್. ಎ. ಮೊಹಮ್ಮದ್ ಅವರನ್ನು ಸನ್ಮಾನಿಸಲು ನಿರ್ಧರಿಸಿದೆ.
ಈ ಭವ್ಯ ಸಮಾರಂಭವು 2026 ಫೆಬ್ರವರಿ 14ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಜ್ಞಾನ ಜ್ಯೋತಿ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಕರ್ನಾಟಕ ಹಾಗೂ ಕೇರಳದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಕುಟುಂಬ ಸಮಾಗಮಕ್ಕೆ ಹರ್ಷ ತುಂಬುವಂತೆ ಖ್ಯಾತ ಗಾಯಕರು ಎಂ.ಎ.ಗಫೂರ್ ಮತ್ತು ಕಣ್ಣೂರು ಆಬಿದ್ ಅವರ ಸಂಗೀತ ಕಾರ್ಯಕ್ರಮವೂ ನಡೆಯಲಿದ್ದು, ಈ ಸಮಾರಂಭವು ಸೇವಾ ಪರಂಪರೆ, ಸಾಮಾಜಿಕ ಬದ್ಧತೆ ಮತ್ತು ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಮಹತ್ವದ ಘಟ್ಟವಾಗಲಿದೆ.





