ಬೆಂಗಳೂರು: ನವ ಕರ್ನಾಟಕ ನಿರ್ಮಾಣ ಆಂದೋಲನದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಕೇಂದ್ರ ಸಚಿವರಾದ ಸಿ.ಎಂ. ಇಬ್ರಾಹಿಂ ಅವರು ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) 2026ರ ಜಾತಿ ತಾರತಮ್ಯ ವಿರೋಧಿ ನಿಯಮಾವಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯಗಳು ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, 2016ರ ಜನವರಿ 17ರಂದು ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆಯ ನಂತರ ದೇಶವ್ಯಾಪಿ ಚರ್ಚೆ ಪ್ರಾರಂಭವಾಗಿ, ನ್ಯಾಯಾಂಗದ ಹಸ್ತಕ್ಷೇಪದ ಮೂಲಕ ಕಠಿಣ ನಿಯಮಾವಳಿಯ ಅವಶ್ಯಕತೆ ಮೂಡಿದುದನ್ನು ನೆನಪಿಸಿದರು.
UGC 2026 ನಿಯಮಾವಳಿ ವಿರುದ್ಧ ಕೆಲವರು ವ್ಯಕ್ತಪಡಿಸಿರುವ ಆಕ್ಷೇಪಣೆಗಳ ಕುರಿತು ಮಾತನಾಡಿದ ಅವರು, ಅವು ಆಧಾರರಹಿತ ಮತ್ತು ಕೆಲ ಹಿತಾಸಕ್ತಿಗಳ ಪ್ರಚೋದನೆಯ ಫಲವೆಂದು ಹೇಳಿದರು. ನಿಯಮಾವಳಿಯಲ್ಲಿ ಎಸ್.ಸಿ., ಎಸ್.ಟಿ., ಓಬಿಸಿ ವರ್ಗಗಳ ರಕ್ಷಣೆಗೆ ಸ್ಪಷ್ಟ ಒತ್ತು ನೀಡಿರುವುದು ಸರಿಯೇ ಹೊರತು ತಪ್ಪಲ್ಲ. ಜಾತಿ ತಾರತಮ್ಯವು ಈ ವರ್ಗಗಳ ವಿರುದ್ಧವೇ ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ಅವರಿಗೆ ಭದ್ರತೆ ಒದಗಿಸುವ ಕ್ರಮಗಳು ಅಗತ್ಯವೆಂದು ಹೇಳಿದರು.
UGC 2012ರ ಮಾರ್ಗಸೂಚಿಗಳು ಕೇವಲ ಸಲಹಾತ್ಮಕವಾಗಿದ್ದು, ದೂರುಗಳಿಗೆ ಸೂಕ್ತ ನ್ಯಾಯ ಸಿಗದಿರುವುದು ಮತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ವಿಫಲವಾಗಿರುವುದು ಹೊಸ ನಿಯಮಾವಳಿಯ ಅಗತ್ಯತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಐಐಎಸ್ಸಿ, ಐಐಎಂ, ಐಐಟಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಬಂದ ದೂರುಗಳ ಸಂಖ್ಯೆ 2019-20ರಲ್ಲಿ 173 ಇಂದ 2023-24ರಲ್ಲಿ 378ಕ್ಕೆ ಏರಿರುವುದನ್ನು ಉದಾಹರಿಸಿದರು. ಕಳೆದ ಐದು ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗಿರುವುದನ್ನು ಅವರು ಉಲ್ಲೇಖಿಸಿದರು.
ಹೊಸ ನಿಯಮಾವಳಿಯಲ್ಲಿ 24×7 ಸಹಾಯವಾಣಿ, ಆನ್‌ಲೈನ್ ಪೋರ್ಟಲ್, ಬಹುಸದಸ್ಯರ ಸಮತಾ ಸಮಿತಿ, ಸಮಯಬದ್ಧ ತನಿಖಾ ವ್ಯವಸ್ಥೆ ಸೇರಿದಂತೆ ಸಂಸ್ಥಾತ್ಮಕ ಚೌಕಟ್ಟನ್ನು ರೂಪಿಸಿರುವುದು ವಿದ್ಯಾರ್ಥಿಗಳ ರಕ್ಷಣೆಗೆ ಅನುಕೂಲಕರವಾಗಿದೆ ಎಂದು ಹೇಳಿದರು. ಈ ವ್ಯವಸ್ಥೆ ಕೇವಲ ಹಿಂದುಳಿದ ವರ್ಗಗಳಿಗಷ್ಟೇ ಸೀಮಿತವಾಗದೆ, ಲೈಂಗಿಕ ಅಲ್ಪಸಂಖ್ಯಾತರು, ಅಂಗವಿಕಲರು ಮತ್ತು ದೂರ ಶಿಕ್ಷಣ ವಿದ್ಯಾರ್ಥಿಗಳನ್ನೂ ಒಳಗೊಂಡಿದೆ ಎಂದು ತಿಳಿಸಿದರು.
ರಾಜಕೀಯ ನಾಯಕರು ಹಾಗೂ ನ್ಯಾಯಾಲಯಗಳು ಈ ನಿಯಮಾವಳಿಯ ಸಂವಿಧಾನಾತ್ಮಕ ಅವಶ್ಯಕತೆಯನ್ನು ಸಮರ್ಪಕವಾಗಿ ವಿವರಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟ ಅವರು, ಸಾಮಾಜಿಕ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ಒಮ್ಮತ ಮೂಡಿಸಲು ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. UGC 2026 ನಿಯಮಾವಳಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ರೋಹಿತ್ ವೇಮುಲ ಅವರಂತಹ ಘಟನೆಗಳು ಮರುಕಳಿಸದಂತೆ ತಡೆಯಬಹುದು ಮತ್ತು ಹಿಂದುಳಿದ ಸಮುದಾಯಗಳಲ್ಲಿ ಉನ್ನತ ಶಿಕ್ಷಣದತ್ತ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಹೇಳಿದರು.





