ಇದೇ ತಿಂಗಳು 25 ಮತ್ತು 27ರಂದು ಜರುಗುವ ಗ್ರಾಮ ಅಧಿ ದೇವರಾದ ಶ್ರೀ ನಾಗನಾಥೇಶ್ವರ ಹಾಗೂ ಸಿರಿಗೇರಮ್ಮ ದೇವಿ ಜಾತ್ರೆಯ ನಿಮಿತ್ತವಾಗಿ ಇಲ್ಲಿನ ಗ್ರಾಮ ಪಂಚಾಯತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಪಿಡಿಒ ಪೀರಸಾಬ್ ಮಾ, 25 ರಂದು ನಾಗನಾಥೇಶ್ವರ ರಥೋತ್ಸವ, 27ರಂದು ಸಿರಿಗೇರಮ್ಮ ದೇವಿ ರಥೋತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ವಿಜೃಂಭಣೆಯಿಂದ ನಡೆಸಿಕೊಡಬೇಕಾಗಿದೆ. ಇದರಲ್ಲಿ ಗ್ರಾಮ ಆಡಳಿತ ಮತ್ತು ಗ್ರಾಮ ಸದಸ್ಯರ ಮುತುವರ್ಜಿ ಅತ್ಯವಶ್ಯಕ.
ಜಾತ್ರಾ ಸಂದರ್ಭದಲ್ಲಿ ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ತಿಳಿಸಬೇಕೆಂದರು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ತೇರು ಬೀದಿಯಿಂದ ಬಸವಣ್ಣನ ಗುಡಿವರೆಗೆ ರಸ್ತೆ ದುರಸ್ತಿಗೊಳಿಸಿ ಅಗಲೀಕರಣ ಮಾಡಬೇಕು. ರಸ್ತೆಗೆ ಅಡ್ಡವಾಗಿರುವ ಬೀದಿಬದಿ ಶೆಡ್ ಗಳನ್ನು ತೆರವುಗೊಳಿಸಬೇಕು. ಎಲ್ಲಾ ಮುಖ್ಯ ರಸ್ತೆಗಳನ್ನು ದುರಸ್ತಿಗೊಳಿಸಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಬೇಕು. ಕುಡಿಯುವ ನೀರಿನ ಭಾವ ಉಂಟಾಗದಂತೆ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಬೀದಿ ದೀಪ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಬೇಕೆಂದರು.
ಪ್ರತಿಕ್ರಿಯಿಸಿದ ಪಿಡಿಒ ಆಯಾ ವಾರ್ಡಿನ ಸದಸ್ಯರು ತಮ್ಮ ತಮ್ಮ ಏರಿಯಾಗಳಲ್ಲಿ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಬೇಕೆಂದರು. ಅದೇ ರೀತಿ 26 ನೇ ತಾರೀಕು ಅಡವಿ ಈರಣ್ಣ ದೇವಸ್ಥಾನದಲ್ಲಿ ಅಡವಿ ಈರಣ್ಣ ದೇವರ ಪೂಜಾ ಕಾರ್ಯಗಳು ನಡೆಯಲಿದ್ದು ಸಾವಿರಾರು ಜನ ಭಕ್ತಾದಿಗಳು ಆಗಮಿಸುತ್ತಾರೆ. ಅಲ್ಲಿಯೂ ಸಹ ಕುಡಿಯುವ ನೀರಿನ ಸೌಲಭ್ಯ, ರಸ್ತೆ ದುರಸ್ತಿ ಕಾರ್ಯ ಹಮ್ಮಿಕೊಳ್ಳಬೇಕೆಂದರು. ಇದಕ್ಕೆ ಎಲ್ಲ ಸದಸ್ಯರ ಅನುಮೋದನೆ ದೊರೆಯಿತು.
ಸಭೆಯಲ್ಲಿ ಹೆಚ್ ದ್ಯಾವಣ್ಣ, ಅಡಿವೆಯ ಸ್ವಾಮಿ, ಬಿ ಉಮೇಶ, ಗೋಡೆ ಚಿನ್ನಪ್ಪ, ನಾಗರಾಜ, ಗುಡಟ್ಟಿ ಈರಣ್ಣ, ಆಲಿಭಾಷಾ ,ಕರಿಬಸಪ್ಪ, ಕುಂಬಾರ್ ಬಸವರಾಜ, ರಾಘವೇಂದ್ರ, ಸದ್ದಾಂ, ಅನಿಲ್, ಸಲೀಂ, ಸೇರಿದಂತೆ ಬಹುತೇಕ ಸದಸ್ಯರು ಭಾಗವಹಿಸಿದ್ದರು.






