ಹಾವೇರಿ, ಜೂನ್ 15: ಕರ್ನಾಟಕ ರಾಜ್ಯ ಉಲಮಾ ಸೊಸೈಟಿ (ರಿ) ವತಿಯಿಂದ ಹಾವೇರಿಯ ರಜನಿ ಕನ್ವೆಂಶನ್ ಹಾಲ್‌ನಲ್ಲಿ ಆಯೋಜಿಸಲಾದ ಉಲಮಾಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಸಮ್ಮೇಳನವು ಭಾನುವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ನಾಯಕರಾದ ಸಲೀಂ ಅಹ್ಮದ್ ಅವರು ಭಾಗವಹಿಸಿ ಮಾತನಾಡಿದರು.
ಸಮ್ಮೇಳನವನ್ನು ಕಲಬುರ್ಗಿಯ ಖ್ವಾಜಾ ಬಂದೇ ನವಾಝ್ ದರ್ಗಾದ ಮುಖ್ಯಸ್ಥರು ಹಾಗೂ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಹಾಫೀಜ್ ಸೈಯದ್ ಮೊಹಮ್ಮದ್ ಅಲಿ ಹುಸೈನಿ ಅವರೊಂದಿಗೆ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಲೀಂ ಅಹ್ಮದ್ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಉಲಮಾಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಧಾರ್ಮಿಕ ಜ್ಞಾನವನ್ನು ಸಮಾಜಮುಖಿ ಸೇವೆಯೊಂದಿಗೆ ಸಂಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಉಲಮಾಗಳು ನಿರಂತರವಾಗಿ ಮಾಡುತ್ತಿದ್ದು, ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ನೈತಿಕ ಮೌಲ್ಯಗಳ ಬೆಳವಣಿಗೆಯಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿಲಂಗಾನ ದರ್ಗಾ ಶರೀಫ್‌ನ ಸೈಯದ್ ಹೈದರ್ ಪಾಶಾ ವಲಿಯುಲ್ಲಾ ಸಾಹೇಬ್, ಮೌಲಾನಾ ಫಾಜೀಲ್ ರಝ್ವಿ ಕಾವಲಕಟ್ಟೆ, ಕರ್ನಾಟಕ ರಾಜ್ಯ ಉಲಮಾ ಸೊಸೈಟಿ ಅಧ್ಯಕ್ಷರಾದ ಸೈಯದ್ ಮೊಯಿನುದ್ದೀನ್, ಶಾಸಕರಾದ ಶ್ರೀನಿವಾಸ್ ಮಾನೆ, ಯಾಸಿರ್ ಖಾನ್ ಪಠಾಣ್, ಡಿಸಿಸಿ ಅಧ್ಯಕ್ಷರಾದ ಸಂಜೀವ್ ನೀರಲಗಿ, ಮಾಜಿ ಶಾಸಕರಾದ ಅಜಂ ಪೀರ್ ಖಾದ್ರಿ ಹಾಗೂ ವಿ.ಎಸ್. ಪಾಟೀಲ್ ಉಪಸ್ಥಿತರಿದ್ದರು.
ಇದಲ್ಲದೆ ಸಮಿತಿಯ ಗೌರವ ಕಾರ್ಯದರ್ಶಿ ಹಝ್ರತ್ ಅಲಿ, ಸಮಿತಿಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಉಲಮಾಗಳು, ಧಾರ್ಮಿಕ ಮುಖಂಡರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
