ಇತ್ತೀಚೆಗೆ ಬಿಡುಗಡೆಯಾದ ಎಸ್‌ಎಸ್‌ಎಲ್‌ಸಿ ಫಲಿತಾಂಶವು ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಶೇ. 92ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಮೇಲ್ನೋಟಕ್ಕೆ ಸಂತಸ ತಂದರೂ, ಇದರ ಹಿಂದಿರುವ “ಸುಧಾರಣೆ”ಯ ಹಾದಿ ಮಾತ್ರ ಅತಂಕಕಾರಿಯಾಗಿದೆ. ಸರ್ಕಾರದ ದೃಷ್ಟಿಯಲ್ಲಿ ಸುಧಾರಣೆ ಎಂದರೆ ಕೇವಲ ಉತ್ತೀರ್ಣರ ಸಂಖ್ಯೆಯನ್ನು ಹೆಚ್ಚಿಸುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಂಕಗಳ ಇಳಿತ ಮತ್ತು ಶಿಕ್ಷಕರ ಸಂಕಷ್ಟ:
ಪರೀಕ್ಷೆಯಲ್ಲಿ ಪಾಸಾಗಲು ಬೇಕಾದ ಕನಿಷ್ಠ ಅಂಕಗಳನ್ನು 28 ರಿಂದ 13ಕ್ಕೆ ಇಳಿಸಿರುವುದು ಗುಣಮಟ್ಟದ ಶಿಕ್ಷಣಕ್ಕೆ ಅಡಿಗಲ್ಲಾಗಲು ಸಾಧ್ಯವೇ? ಇದು ಕೇವಲ ಅಂಕಿ-ಅಂಶಗಳನ್ನು ಅಂದವಾಗಿ ತೋರಿಸುವ ತಂತ್ರದಂತೆ ಭಾಸವಾಗುತ್ತಿದೆ. ಫಲಿತಾಂಶ ಸುಧಾರಿಸಬೇಕೆಂಬ ಹಠಕ್ಕೆ ಬಿದ್ದ ಇಲಾಖೆ, ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ಮೇಲೆ ಅತಿಯಾದ ಒತ್ತಡ ಹೇರುತ್ತಿದೆ. “ವಿದ್ಯಾರ್ಥಿಗಳು ಫೇಲಾದರೆ ಶಿಕ್ಷಕರ ಮೇಲೆ ಕ್ರಮ” ಎಂಬ ನಿಯಮವು ಶಿಕ್ಷಕ ವೃತ್ತಿಯ ಘನತೆಗೆ ಧಕ್ಕೆ ತಂದಿದೆ. ಇಂದು ಶಿಕ್ಷಕರು ಮಕ್ಕಳನ್ನು ತಿದ್ದುವ ಸ್ವಾತಂತ್ರ್ಯ ಕಳೆದುಕೊಂಡು, ಶಿಕ್ಷೆಗೊಳಗಾಗುವ ಭಯದಲ್ಲಿ ದಿನದೂಡುವಂತಾಗಿದೆ.
ವಿದ್ಯಾರ್ಥಿಗಳ ಮನಸ್ಥಿತಿ ಮತ್ತು ತಂತ್ರಜ್ಞಾನದ ಪ್ರಭಾವ:
ಹಿಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಇದ್ದ ಅಪಾರ ಗೌರವ ಮತ್ತು ಕಲಿಕೆಯಲ್ಲಿನ ಶಿಸ್ತು ಇಂದು ಮಾಯವಾಗುತ್ತಿದೆ. ಇದಕ್ಕೆ ಸಮಾಜದ ಬದಲಾದ ದೃಷ್ಟಿಕೋನ ಮತ್ತು ಸಾಮಾಜಿಕ ಜಾಲತಾಣಗಳ ಅತಿರೇಕದ ಬಳಕೆ ಮುಖ್ಯ ಕಾರಣ. ಶೇ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇನ್‌ಸ್ಟಾಗ್ರಾಮ್, ರೀಲ್ಸ್ ಮತ್ತು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ. ಈ ವ್ಯಸನವು ಅವರ ಏಕಾಗ್ರತೆಯನ್ನು ಕಸಿದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸರ್ಕಾರದ ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯದೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕಿದೆ.
ಹಳ್ಳ ಹಿಡಿದ ಮೌಲ್ಯಮಾಪನ ವ್ಯವಸ್ಥೆ:
ಇವೆಲ್ಲದಕ್ಕಿಂತ ಗಂಭೀರವಾದ ಅಂಶವೆಂದರೆ ಮೌಲ್ಯಮಾಪನದಲ್ಲಿನ ಎಡವಟ್ಟುಗಳು. ವರ್ಷವಿಡೀ ಬೆವರು ಸುರಿಸಿ ಓದುವ ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರ ನಿರ್ಲಕ್ಷ್ಯ ದೊಡ್ಡ ಶಾಪವಾಗಿ ಪರಿಣಮಿಸಿದೆ. ಇತ್ತೀಚಿನ ಫೋಟೋಕಾಪಿ (ನಕಲು ಪ್ರತಿ) ಪ್ರಕರಣಗಳಲ್ಲಿ ಕಂಡುಬಂದ ಲೋಪದೋಷಗಳು ಮೌಲ್ಯಮಾಪನ ವ್ಯವಸ್ಥೆ ತನ್ನ ಮೌಲ್ಯವನ್ನೇ ಕಳೆದುಕೊಂಡಿರುವುದಕ್ಕೆ ಸಾಕ್ಷಿ. ಬೇರೆ ವಿಷಯದ ಶಿಕ್ಷಕರಿಗೆ ಮತ್ತೊಂದು ವಿಷಯದ ಕೀ ಉತ್ತರಗಳನ್ನು ನೀಡುವುದು, ಮೌಲ್ಯಮಾಪನ ಕೇಂದ್ರಗಳಲ್ಲಿ ವಿಭಿನ್ನ ನಿಯಮಗಳನ್ನು ಅನುಸರಿಸುವುದು ಮಕ್ಕಳ ಭವಿಷ್ಯದ ಜೊತೆಗಿನ ಆಟವಾಗಿದೆ.
ಒಬ್ಬ ವಿದ್ಯಾರ್ಥಿ ಕಷ್ಟಪಟ್ಟು 90 ಅಂಕ ಗಳಿಸಿದರೆ, ಮೌಲ್ಯಮಾಪಕರ ಉದಾರತೆಯಿಂದ (ಅಥವಾ ಉದಾಸೀನತೆಯಿಂದ) ಏನೂ ಓದದ ವಿದ್ಯಾರ್ಥಿಯೂ ಅಷ್ಟೇ ಅಂಕ ಪಡೆಯುವುದು ನಿಜವಾದ ಪ್ರತಿಭೆಗೆ ಮಾಡುವ ಅವಮಾನ. ಇದು ಓದುವ ಮಕ್ಕಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುತ್ತಿದೆ.
ಶಿಕ್ಷಣ ಇಲಾಖೆಗೆ ಈಗ ಬೇಕಿರುವುದು ಅಂಕಿ-ಅಂಶಗಳ ಸುಧಾರಣೆಯಲ್ಲ, ಬದಲಾಗಿ ಮೂಲಭೂತ ಗುಣಮಟ್ಟದ ಸುಧಾರಣೆ. ರಾಜ್ಯಾದ್ಯಂತ ಮೌಲ್ಯಮಾಪನಕ್ಕೆ ಏಕರೂಪದ ಕಟ್ಟುನಿಟ್ಟಿನ ನಿಯಮಗಳಿರಲಿ. ಶಿಕ್ಷಕರನ್ನು ಕೇವಲ ಫಲಿತಾಂಶ ತರುವ ಯಂತ್ರಗಳಂತೆ ನೋಡದೆ, ಗೌರವಯುತವಾಗಿ ನಡೆಸಿಕೊಳ್ಳಲಿ. ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ, ಶಿಕ್ಷಣ ವ್ಯವಸ್ಥೆಯನ್ನೇ ಮೊದಲು ಮಾಪನಕ್ಕೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ.ಆಗ ಮಾತ್ರ ನಮ್ಮ ನಾಡಿನ ಶೈಕ್ಷಣಿಕ ಭವಿಷ್ಯಕ್ಕೆ ಒಂದು ಅರ್ಥ ಸಿಗಲು ಸಾಧ್ಯ.
ಡಾ. ಪಿ ವೈ ಇಮಾನ್ಯುಯಲ್.
ಶಿಕ್ಷಕರು ಮತ್ತು ಸಾಹಿತಿಗಳು
ಸಂಸ್ಥಾಪಕ ಅಧ್ಯಕ್ಷರು –
ಅನುಬಂಧ ಸಮೂಹ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಯುವ ಲೇಖಕರ ಸಂಘ
ರಾಜ್ಯ ಪ್ರಧಾನ ಕಾರ್ಯದರ್ಶಿ – ಕ ಮ ರ ವೇ



