ಬೆಂಗಳೂರು, ಜು.29: ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ವತಿಯಿಂದ ಖ್ಯಾತ ಮನೋಶಾಸ್ತ್ರಜ್ಞೆ, ಕ್ಲಿನಿಕಲ್ ಸೈಕಾಲಜಿಸ್ಟ್, ಸಮಾಲೋಚಕಿ, ಸಂಶೋಧಕಿ, ಪತ್ರಕರ್ತೆ, ಲೇಖಕಿ ಹಾಗೂ ಸಮಾಜಸೇವಕಿ ಡಾ. ಆರ್ನವಿ ಕಾಂಚನ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಆನಂದ್ ಸಿ. ತಿರುಮಲ ಅವರನ್ನು ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿರುವ ಸಂಸ್ಥೆಯ ರಾಜ್ಯ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಂ. ಗಣೇಶ್ ಗೌಡ ಹಾಗೂ ಗೌರವ ಅಧ್ಯಕ್ಷರಾದ ಶ್ರೀ ಕೃಷ್ಣ ಗುರೂಜಿ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಇಬ್ಬರು ಗಣ್ಯರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಂ.ಗಣೇಶ್ ಗೌಡರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಂಸ್ಥೆಯ ಧ್ಯೇಯವಾಗಿದ್ದು, ಡಾ. ಆರ್ನವಿ ಕಾಂಚನ ಅವರು ಮಾನಸಿಕ ಆರೋಗ್ಯ, ಸಮಾಲೋಚನೆ, ಸಂಶೋಧನೆ ಹಾಗೂ ಸಾಮಾಜಿಕ ಸೇವೆಯಲ್ಲಿ ಸಲ್ಲಿಸಿರುವ ಕೊಡುಗೆ ಮತ್ತು ಆನಂದ್ ಸಿ. ತಿರುಮಲ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿದ ಡಾ. ಆರ್ನವಿ ಕಾಂಚನ ಹಾಗೂ ಆನಂದ್ ಸಿ. ತಿರುಮಲ ಅವರು, ತಮ್ಮನ್ನು ಗೌರವಿಸಿದ ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಸನ್ಮಾನ ಸಮಾರಂಭವು ಆತ್ಮೀಯವಾಗಿ ನೆರವೇರಿತು.






