ಶ್ರೀಕ್ಷೇತ್ರ ಕೈವಾರದಲ್ಲಿ 22.04.1984 ರಂದು ಜನಿಸಿದ ಶ್ರೀಮತಿ ಗೀತಾ ಹೆಚ್ ಕೈವಾರ ಅವರು ಬಾಲ್ಯದಿಂದಲೇ ಸಂಗೀತ–ನೃತ್ಯಗಳತ್ತ ಅಪಾರ ಆಸಕ್ತಿ ಬೆಳೆಸಿಕೊಂಡು, ಇಂದು ಗಾಯನ, ನೃತ್ಯ, ಸಂಗೀತ ನಿರ್ದೇಶನ ಹಾಗೂ ಸಮಾಜ ಸೇವೆ ಎಂಬ ನಾಲ್ಕು ಕ್ಷೇತ್ರಗಳಲ್ಲಿ ತಮ್ಮದೇ ಆದ ಮುದ್ರೆಯನ್ನು ಮೂಡಿಸಿರುವ ಬಹುಮುಖ ಪ್ರತಿಭೆ.
ತಂದೆ ಶ್ರೀ ಹನುಮಂತಪ್ಪ ಹಾಗೂ ತಾಯಿ ಶ್ರೀಮತಿ ಸರಸ್ವತಮ್ಮ ಅವರ ಸತ್ಸಂಸ್ಕಾರಗಳಲ್ಲಿ ಬೆಳೆದ ಗೀತಾ ಅವರು, ಶಾಲಾ ಶಿಕ್ಷಣವನ್ನು ಕೈವಾರದಲ್ಲೇ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಬಿ.ಎ ಪದವಿ ಪಡೆದರು. ಪ್ರಸ್ತುತ ಅವರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಶ್ರೀ ಕೆ.ಎಸ್. ಮಂಜುನಾಥ ರೆಡ್ಡಿ (ಜನರಲ್ ಮ್ಯಾನೇಜರ್) ಅವರ ಬೆಂಬಲದೊಂದಿಗೆ ಕುಟುಂಬ ಹಾಗೂ ಕಲೆಯ ನಡುವೆ ಸಮತೋಲನ ಸಾಧಿಸಿದ್ದಾರೆ. ಪುತ್ರ ಭುವನ್ ಜಿ.ಎಂ (17) ಮತ್ತು ಪುತ್ರಿ ಎಂ. ಐಶ್ವರ್ಯಾ ರೆಡ್ಡಿ (6) ಇವರ ಹೆಮ್ಮೆ.
ಸಂಗೀತದಲ್ಲಿ ಶ್ರೀಮತಿ ಭಾರ್ಗವಿ ಕೈವಾರ ಮತ್ತು ಶ್ರೀಮತಿ ವಿಜಯಲಕ್ಷ್ಮಿ (ಹಂಸಲೇಖರವರ ಹಿರಿಯ ಸಹೋದರಿ) ಅವರಿಂದ ತರಬೇತಿ ಪಡೆದ ಗೀತಾ ಅವರು, ನೃತ್ಯಾ ಭ್ಯಾಸವನ್ನು ವಿದುಶಿ ಶ್ರೀಮತಿ ವೈಜಯಂತಿ ಕಾಶಿ ಅವರ ಮಾರ್ಗದರ್ಶನದಲ್ಲಿ ಅರಿತುಕೊಂಡಿದ್ದಾರೆ. ಹಿನ್ನಲೆ ಗಾಯನ, ಸಂಗೀತ ನಿರ್ದೇಶನ, ಸಂಗೀತ ಸಂಯೋಜನೆ, ಸಂಗೀತ ರಚನೆ, ನೃತ್ಯ ನಿರ್ದೇಶನ ಮತ್ತು ನಟನೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಶ್ರೀಮುದ್ರ ಅಕಾಡೆಮಿಯ ಸಂಸ್ಥಾಪಕಿಯಾಗಿರುವ ಗೀತಾ ಅವರು, ಕಲೆಯ ಮೂಲಕ ಸಮಾಜ ಸೇವೆ ಮಾಡುವ ಉದ್ದೇಶದಿಂದ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಗೀತ ಅವರು 215ಕ್ಕೂ ಹೆಚ್ಚು ಭಕ್ತಿ ಗೀತೆ, ಭಾವಗೀತೆ,ಜನಪದ ಹಾಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.
1994ರಿಂದ ಇಂದಿನವರೆಗೆ ಗೀತಾ ಹೆಚ್ ಕೈವಾರ ಅವರು ಸುಮಾರು 62 ಪ್ರಶಸ್ತಿಗಳು ಗಳಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ, ಡಾಕ್ಟರೇಟ್ ಪ್ರಶಸ್ತಿ, ಕೆಂಪೆಗೌಡ ಪ್ರಶಸ್ತಿ (3 ಬಾರಿ), ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಡಾ.ಅಬ್ದುಲ್ ಕಲಾಂ ಪ್ರಶಸ್ತಿ (2), ಕುವೆಂಪು ಪ್ರಶಸ್ತಿ (2), ಸಿ.ವಿ. ರಾಮನ್ ಪ್ರಶಸ್ತಿ, ಗಂಗೂಬಾಯಿ ಪ್ರಶಸ್ತಿ, ಗಾನಕೋಗಿಲೆ ಪ್ರಶಸ್ತಿ, ಡಾ.ರಾಜ್ ಕುಮಾರ್ ಪ್ರಶಸ್ತಿ, ಸಮಾಜ ರತ್ನ,ರಾಜ್ಯೋತ್ಸವ ಪ್ರಶಸ್ತಿ, ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಡಾ. ಪುನೀತ್ ರಾಜ್ ಕುಮಾರ್ ಪ್ರಶಸ್ತಿ, ಮದರ್ ತೇರೇಸ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಅಶೋಕ ಚಕ್ರ ಪ್ರಶಸ್ತಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಕರುನಾಡ ನಿಧಿ ಪ್ರಶಸ್ತಿ,ಕರುನಾಡ ಕಿರಣ ಪ್ರಶಸ್ತಿ,ಪದ್ಮಶ್ರೀ ಪ್ರಶಸ್ತಿ, ರವಿಬೆಳಗೆರೆ ಪ್ರಶಸ್ತಿ, ಸೇರಿದಂತೆ ಅನೇಕ ಗೌರವಗಳು ಇವರಿಗೆ ಲಭಿಸಿವೆ. ಜೊತೆಗೆ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯೂ ಮಾಡಿದ್ದಾರೆ.

ಇಲ್ಲಿಯವರೆಗೆ ಗೀತಾ ಅವರು 215ಕ್ಕೂ ಹೆಚ್ಚು ಭಕ್ತಿ ಗೀತೆ, ಭಾವಗೀತೆ, ಜನಪದ ಹಾಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 16 ಭಕ್ತಿಗೀತೆಗಳ ಆಲ್ಬಂಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ಇತ್ತೀಚೆಗೆ “ಕುರುಡು ಕಂಚಣ” ಕನ್ನಡ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿ, ಚಿತ್ರರಂಗದಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. 360ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿ, ಜನಮನ ಗೆದ್ದಿದ್ದಾರೆ.
ಕಲೆಯನ್ನು ಕೇವಲ ವೃತ್ತಿಯಾಗಿ ನೋಡದೆ, ಸಮಾಜಕ್ಕೆ ಸೇವೆಯಾಗಿ ಪರಿಗಣಿಸಿರುವ ಡಾ. ಗೀತಾ ಹೆಚ್ ಕೈವಾರ ಅವರ ಸಾಧನೆ, ಹೊಸ ತಲೆಮಾರಿಗೆ ಪ್ರೇರಣೆಯಾಗಿದೆ. ಗಾನ–ನೃತ್ಯ–ಸಮಾಜ ಸೇವೆ ಎಂಬ ತ್ರಿವೇಣಿ ಸಂಗಮವಾಗಿ ಅವರು ಕನ್ನಡನಾಡಿನ ಹೆಮ್ಮೆ ಆಗಿದ್ದಾರೆ.






