ಜೀವನದಲ್ಲಿ ಎದುರಾದ ಸಂಕಷ್ಟಗಳು ಕೆಲವರನ್ನು ಕುಗ್ಗಿಸುತ್ತವೆ, ಆದರೆ ಕೆಲವರು ಅದನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಹೊಸ ದಾರಿಯನ್ನು ನಿರ್ಮಿಸುತ್ತಾರೆ. ಅಂತಹ ಸಾಧಕರಲ್ಲಿ ಒಬ್ಬರು ಜಯನ್ ಎಸ್. ಅವರು ತಮ್ಮ ಬಾಲ್ಯದಲ್ಲೇ ಕಠಿಣ ಅನುಭವಗಳನ್ನು ಎದುರಿಸಿ, ಇಂದು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿ ಅವರು ಬೆಳೆಯುತ್ತಿದ್ದಾರೆ.
ಬೆಂಗಳೂರು ಬಸವೇಶ್ವರನಗರದಲ್ಲಿ ಜನಿಸಿದ ಜಯನ್ ಎಸ್ ಅವರ ತಂದೆ ಟಿ.ಎಂ.ಶಶಿಧರನ್ ಹಾಗೂ ತಾಯಿ ಗಿರಿಜಾ ದೇವಿ. ಬಾಲ್ಯದಲ್ಲೇ ಅವರು ತೀವ್ರ ಸಂಕಷ್ಟವನ್ನು ಅನುಭವಿಸಿದರು. ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಕೇವಲ 15ನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ಆ ದುಃಖದ ನೋವು ಇನ್ನೂ ಮಾಸುವ ಮುನ್ನವೇ, 19ನೇ ವಯಸ್ಸಿನಲ್ಲಿ ಕೆಲವು ಕಾರಣಾಂತರಗಳಿಂದ ಮನೆ ಬಿಟ್ಟು ಹೊರಬರಬೇಕಾಯಿತು. ಜೀವನದ ಈ ಹಂತವು ಅವರಿಗೆ ಅತ್ಯಂತ ಕಠಿಣವಾಗಿತ್ತು.
ಆದರೂ, ಸಂಕಷ್ಟಗಳ ಮುಂದೆ ತಲೆಬಾಗದೇ ತಮ್ಮದೇ ಆದ ದಾರಿಯನ್ನು ಆಯ್ದುಕೊಂಡ ಜಯನ್, ತಮ್ಮ ಪರಿಶ್ರಮದ ಮೂಲಕ ಬದುಕಿನಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದರು. ಆರಂಭಿಕ ಹಂತದಲ್ಲಿ ಕಷ್ಟಕರ ಜೀವನ ನಡೆಸಿದ ಅವರು, ನಂತರ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡರು.
ಆದಾಯ ಹೆಚ್ಚಾದಂತೆ, ಸಮಾಜದತ್ತ ಅವರ ಒಲವು ಮತ್ತಷ್ಟು ಹೆಚ್ಚಾಯಿತು. ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಆಹಾರದ ವ್ಯವಸ್ಥೆ ಮಾಡುವುದು, ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕಗಳು ಮತ್ತು ಸಾಮಗ್ರಿಗಳನ್ನು ನೀಡುವುದು ಅವರ ದೈನಂದಿನ ಕಾರ್ಯಗಳಾಗಿ ಮಾರ್ಪಟ್ಟವು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅವರು, ಹಲವರ ಜೀವನದಲ್ಲಿ ಬೆಳಕಿನ ಕಿರಣವಾಗಿದ್ದಾರೆ.
ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಅವರ ಸೇವೆ ಇನ್ನಷ್ಟು ಗಮನಾರ್ಹವಾಗಿತ್ತು. ಆ ಸಮಯದಲ್ಲಿ ಔಷಧಿಗಳು, ಊಟ ಹಾಗೂ ಮಲಗಲು ಅಗತ್ಯವಿರುವ ಹಾಸಿಗೆಗಳ ವ್ಯವಸ್ಥೆ ಮಾಡಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಾದರು. ಅಷ್ಟೇ ಅಲ್ಲದೆ, ಯಾರೂ ಮುಂದೆ ಬರದ ಸಂದರ್ಭದಲ್ಲಿ 15 ಶವಸಂಸ್ಕಾರಗಳನ್ನು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಯನ್ ಅವರ ಸಾಮಾಜಿಕ ಕಾರ್ಯಗಳಿಗೆ ಹೊಸ ದಿಕ್ಕು ದೊರೆತಿದ್ದು, ಹೆಚ್. ಶಿವರಾಮೇಗೌಡ ಅವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ನೇಮಕವಾದಾಗ. ಈ ಹಂತದಿಂದ ಅವರ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಂಡು ಜನಪ್ರಿಯತೆ ಹೆಚ್ಚಿಸಿತು.
ಇಂದು ಅವರ ಸಮಾಜ ಸೇವೆಯನ್ನು ಹಲವು ಸಂಸ್ಥೆಗಳು ಗುರುತಿಸಿ ಸನ್ಮಾನಿಸುತ್ತಿದ್ದಾರೆ. 2026ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಅವರ ಸಾಧನೆಯ ಮತ್ತೊಂದು ಮೈಲುಗಲ್ಲಾಗಿದೆ. ಪ್ರಸ್ತುತ ಅವರು ಡಿಜಿಟಲ್ ಮೀಡಿಯಾದಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದಾರಿದೀಪ ಟ್ರಸ್ಟ್‌ನಲ್ಲಿ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಅಖಿಲ ಭಾರತ ರೈತ ಪಾರ್ಟಿಯಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಅಭಿಮಾನಿಗಳು ಮತ್ತು ರಾಜಕೀಯ ನಾಯಕರು ಅವರನ್ನು ಸಕ್ರಿಯ ರಾಜಕೀಯಕ್ಕೆ ಬರಲು ಆಹ್ವಾನಿಸುತ್ತಿದ್ದಾರೆ. ಆದರೆ, ತಮ್ಮ ಜೀವನದ ಮುಖ್ಯ ಗುರಿ ಸಮಾಜ ಸೇವೆ, ರೈತರ ಹೋರಾಟ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವುದೇ ಎಂದು ಜಯನ್ ಸ್ಪಷ್ಟಪಡಿಸಿದ್ದಾರೆ.
ಸಂಕಷ್ಟದಿಂದ ಸಾಧನೆಗೆ, ನೋವಿನಿಂದ ಸೇವೆಗೆ ಸಾಗಿದ ಜಯನ್ ಎಸ್ ಅವರ ಜೀವನಯಾನ ಇಂದು ಅನೇಕರಿಗೆ ಪ್ರೇರಣೆಯಾಗಿದೆ.






