ಎಲೈಟ್ ಬೆಂಗಳೂರು ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಫೆಬ್ರವರಿ 13, 2026ರಂದು ಸ್ಟಾರ್ ಪ್ಯಾಲೆಸ್‌ನಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಹಬ್ಬ ಮತ್ತು ಪದವಿ ಪ್ರದಾನ ಸಮಾರಂಭ (UKG & SSLC Batch – 2026) ಭವ್ಯವಾಗಿ ನೆರವೇರಿತು. ಮಧ್ಯಾಹ್ನ 2:30ರಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಜ್ರತ್ ಮೌಲಾನಾ ಮುಫ್ತಿ ಮೊಹಮ್ಮದ್ ನಿಜಾಮುದ್ದೀನ್ ಸಾಹೇಬ್ (Mohtamim, Madrasa Markazul Uloom) ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ನೈತಿಕ ಮೌಲ್ಯಗಳ ಅಗತ್ಯತೆ ಹಾಗೂ ಭವಿಷ್ಯದ ಗುರಿಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.
ಗೌರವ ಅತಿಥಿಯಾಗಿ ಭಾಗವಹಿಸಿದ ಡಾ.ಅಲ್ಲಾ ಬಖಾಷ್ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿ, ಪೋಷಕರ ಸಹಕಾರವೇ ಮಕ್ಕಳ ಯಶಸ್ಸಿನ ಮೂಲ ಶಕ್ತಿ ಎಂದು ಅಭಿಪ್ರಾಯಪಟ್ಟರು.

ಶಾಲೆಯ ಚೇರ್ಮನ್ ಶಾಕಿರ್ ಅಲಿ, ಮ್ಯಾನೇಜಿಂಗ್ ಡೈರೆಕ್ಟರ್ ವಾಹೀದ್ ಉಝ್ ಜಮಾ ಹಾಗೂ ಅಕಾಡೆಮಿಕ್ ಡೈರೆಕ್ಟರ್ ಫಸೀಹಾ ಖಾನ್ ಅವರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ, ಶಾಲೆಯ ಮುಂದಿನ ಶೈಕ್ಷಣಿಕ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವಹೀದಾ ಬಾನು ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ವೇದಿಕೆ ಮೇಲೆಯೇ ಡಾಕ್ಟರೇಟ್ ಗೌರವ ನೀಡಿ ಸನ್ಮಾನಿಸಲಾಯಿತು. ಈ ಕ್ಷಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು. ಗಣ್ಯರು ಹಾಗೂ ಪೋಷಕರು ದೀರ್ಘ ಕಾಲ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

UKG ಹಾಗೂ SSLC ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ, ಗಾಯನ, ನಾಟಕ ಹಾಗೂ ದೇಶಭಕ್ತಿ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಮೆರೆದರು.
ಕಾರ್ಯಕ್ರಮವು ಸಂಭ್ರಮ, ಗೌರವ ಹಾಗೂ ಪ್ರೇರಣೆಯಿಂದ ತುಂಬಿ, ವಿದ್ಯಾರ್ಥಿಗಳ ಭವಿಷ್ಯ ಪಯಣಕ್ಕೆ ಹೊಸ ಆತ್ಮವಿಶ್ವಾಸ ತುಂಬಿತು.





