ವರದಿ:- ಎನ್ ರಾಜ್ ಕುಮಾರ್
ವಿಜಯನಗರ(ಕರುನಾಡ ನಿಧಿ ವಾರ್ತೆ):ಫೆ.14:
ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಆಶಯದಂತೆ ಪ್ರಸಕ್ತ ವರ್ಷದಿಂದಲೇ ಹಂಪಿ ಉತ್ಸವವನ್ನು ಇನ್ನು ಮುಂದೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಹಂಪಿಯ ಶ್ರೀ.ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಶುಕ್ರವಾರ ಮೂರು ದಿನಗಳ ಹಂಪಿ ಉತ್ಸವ-2026 ಕಾರ್ಯಕ್ರಮಕ್ಕೆ ನಗಾರಿ ಹಾಗೂ ಡೊಳ್ಳು ಬಾರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಎಂ.ಪಿ.ಪ್ರಕಾಶ್ ಅವರು ಮೈಸೂರು ದಸರಾ ಉತ್ಸವವನ್ನು ನೋಡಿ, ಅದೇ ಮಾದರಿಯಲ್ಲಿ ಹಂಪಿಯಲ್ಲಿಯೂ ಉತ್ಸವ ಆಚರಿಸುವ ಕುರಿತು ಇಂಗಿತ ವ್ಯಕ್ತಪಡಿಸಿದ್ದರು. ಆ ವೇಳೆ ಹಣಕಾಸು ಸಚಿವನಾಗಿ ಉತ್ಸವಕ್ಕೆಬೇಕಾದ ಅನುದಾನ ನೀಡುವುದಾಗಿ ಭರವಸೆ ನೀಡಿದ್ದೆ, ಅಂದಿನಿoದ ಇಂದಿನವರೆಗೂ ನಿರಂತರವಾಗಿ ಹಂಪಿ ಉತ್ಸವ ವೈಭವದಿಂದ ನಡೆಯುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಬಹುತೇಕ ಪರೀಕ್ಷೆ ನಡೆಯುವುದರಿಂದ ಈ ಸಂದರ್ಭದಲ್ಲಿ ಹಂಪಿ ಉತ್ಸವ ಆಚರಿಸುವುದು ಸೂಕ್ತವಲ್ಲ ಎನಿಸುತ್ತದೆ. ಈ ಮೊದಲು ಎಂ.ಪಿ.ಪ್ರಕಾಶ್ ಸಹ ಕನ್ನಡ ರಾಜ್ಯೋತ್ಸವದ ನಂತರ ನ.2 ರಿಂದ 4 ತಾರೀಖಿನಂದೇ ಆಚರಿಸುತ್ತಿದ್ದರು. ಅವರ ಆಶಯದಂತೆ ಪ್ರಸಕ್ತ ವರ್ಷದ ನವೆಂಬರ್‌ನಲ್ಲಿ 3 ದಿನಗಳ ಕಾಲ ಉತ್ಸವ ಅಧಿಕೃತವಾಗಿ ಘೋಷಿಸಿದರು. ಫೆಬ್ರವರಿ ತಿಂಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇರುವುದರಿಂದ ಉತ್ಸವದಲ್ಲಿ ಭಾಗವಹಿಸಲು ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಇತಿಹಾಸ ತಿಳಿಯದವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ:
ಯಾರಿಗೆ ಇತಿಹಾಸದ ಅರಿವಿರುವುದಿಲ್ಲವೋ, ಅವರು ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ ಮಾತುಗಳನ್ನು ಉಲ್ಲೇಖಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತಿಹಾಸ ತಿಳಿಯುವ ಅಗತ್ಯತೆಯನ್ನು ಒತ್ತಿಹೇಳಿದರು. ವಿಜಯನಗರ ಸಾಮ್ರಾಜ್ಯದ ಇತಿಹಾಸವು ಪ್ರತಿಯೊಬ್ಬರಿಗೂ ತಿಳಿದಿರಬೇಕು, ಏಕೆಂದರೆ ಇದು ನಮ್ಮ ನಾಡಿನ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ ಎಂದರು. ಕೇವಲ ರಸ್ತೆ, ಸೇತುವೆ ಅಥವಾ ಬೃಹತ್ ಕಟ್ಟಡಗಳನ್ನು ನಿರ್ಮಿಸುವುದು ಮಾತ್ರ ಅಭಿವೃದ್ಧಿಯಲ್ಲ; ಒಂದು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತದ ಸರ್ವತೋಮುಖ ಬೆಳವಣಿಗೆಯೇ ನಿಜವಾದ ಅಭಿವೃದ್ಧಿ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ವಿಜಯನಗರ ಅರಸರ ಕಾಲದಲ್ಲಿ ಹಂಪಿ ಎಷ್ಟು ಸಂಪದ್ಭರಿತವಾಗಿತ್ತು ಎಂಬುದನ್ನು ವಿದೇಶಿ ಪ್ರವಾಸಿ ಅಬ್ದುಲ್ ರಜಾಕ್ ಅವರ ಬರಹಗಳು ಸ್ಪಷ್ಟಪಡಿಸುತ್ತವೆ ಎಂದು ನೆನಪಿಸಿದ ಅವರು, ಅಂತಹ ಇತಿಹಾಸದಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ತಿಳಿಸಿದರು. ಸಮಾಜದಲ್ಲಿರುವ ಅಸಮಾನತೆ ಮತ್ತು ಬಡತನವನ್ನು ಹೋಗಲಾಡಿಸುವುದೇ ಸರ್ಕಾರದ ಮೂಲ ಗುರಿಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಅವರು ಆಶಿಸಿದರು.

“ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡದಿದ್ದರೆ, ನನ್ನಂತಹ ಸಾಮಾನ್ಯ ವ್ಯಕ್ತಿ ಶಾಸಕರಾಗಲು ಅಥವಾ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳುವ ಮೂಲಕ ಸಂವಿಧಾನದ ಶಕ್ತಿಯನ್ನು ಕೊಂಡಾಡಿದರು. ಸಮಸಮಾಜ ನಿರ್ಮಾಣಕ್ಕಾಗಿ ಜಾತಿ ವ್ಯವಸ್ಥೆ ತೊಲಗಬೇಕು ಮತ್ತು ಪ್ರತಿಯೊಬ್ಬರಿಗೂ ಸಮಾನ ಗೌರವ ಸಿಗಬೇಕು ಎಂದು ಕರೆ ನೀಡಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಗೆ ತಮ್ಮ ಸರ್ಕಾರವು ನಿರಂತರವಾಗಿ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಭರವಸೆಗಳಲ್ಲ, ಅವು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಗುರಿ ಹೊಂದಿರುವ ಕ್ರಾಂತಿಕಾರಿ ಹೆಜ್ಜೆಗಳು ಎಂದು ಬಣ್ಣಿಸಿದರು. ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಭಾವವನ್ನು ಅಂಕಿ-ಅoಶಗಳೊoದಿಗೆ ವಿವರಿಸುತ್ತಾ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಇಂದು ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಿಸುಮಾರು 4,000 ದಿಂದ 5,000 ರೂಪಾಯಿಗಳಷ್ಟು ಆರ್ಥಿಕ ಸಹಾಯ ಲಭಿಸುತ್ತಿದೆ ಎಂದು ತಿಳಿಸಿದರು. ಈ ಹಣವು ಸಾಮಾನ್ಯ ಜನರ ಕೈ ಸೇರುವುದರಿಂದ ಅವರ ಜೀವನಮಟ್ಟ ಸುಧಾರಿಸುವುದಲ್ಲದೆ, ಮಾರುಕಟ್ಟೆಯಲ್ಲಿ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಾಡಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಉತ್ಸವಗಳ ಪಾತ್ರ ದೊಡ್ಡದು ಎಂದು ಅಭಿಪ್ರಾಯಪಟ್ಟ ಅವರು, ಮೈಸೂರು ದಸರಾ ಸೇರಿದಂತೆ ಹಂಪಿ, ಕಿತ್ತೂರು, ಕದಂಬ, ಬನವಾಸಿ ಮತ್ತು ಕರಾವಳಿ ಉತ್ಸವಗಳಿಗೆ ಸರ್ಕಾರವು ಸಕಲ ಹಣಕಾಸಿನ ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ನಾಡಿನ ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಮಾತನಾಡಿ ಹಂಪಿ ಉತ್ಸವ ಆಚರಣೆ ಬಗ್ಗೆ ಸರ್ಕಾರ ಅಧಿಕೃತ ಆದೇಶವಾಗಬೇಕು. ಹೊಸಪೇಟೆ ನಗರದಲ್ಲಿ ಪ್ರಸ್ತುತ ಜಿಲ್ಲಾಧಿಕಾರಿಗಳ ಕಚೇರಿ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೂ.100 ಕೋಟಿ ವೆಚ್ಚದಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಅಗತ್ಯವಾಗಿದೆ. ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗಿರುವ 10 ಎಕರೆ ಜಾಗದಲ್ಲಿ ರೂ.150 ಕೋಟಿ ವೆಚ್ಚದಲ್ಲಿ ಜಿಲ್ಲಾ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಬೇಕಿದೆ. ಜಿಲ್ಲಾ ಆಸ್ಪತ್ರೆ ಆಸ್ಪತ್ರೆಯ ಉಪಕರಣಗಳು ಮತ್ತು ವಸತಿಗೃಹಗಳ ನಿರ್ಮಾಣಕ್ಕಾಗಿ ರೂ.100 ಕೋಟಿ, ಅರಣ್ಯ ಇಲಾಖೆಯ ಕಚೇರಿ ಸಂಕೀರ್ಣಕ್ಕೆ ರೂ.25 ಕೋಟಿ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ರೂ.15 ಕೋಟಿ ಸೇರಿ ಒಟ್ಟು ಹೊಸ ಜಿಲ್ಲೆಯಾಗಿರುವ ವಿಜಯನಗರದ ಅಭಿವೃದ್ಧಿಗಾಗಿ ಸುಮಾರು ರೂ.390 ಕೋಟಿ ಅಗತ್ಯವಿದೆ. ಮುಖ್ಯಮಂತ್ರಿಗಳು ಈ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸುವಂತೆ ಮನವಿ ಮಾಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ಹಂಪಿ ಎನ್ನುವುದು ಕೇವಲ ಕಲ್ಲಿನ ಸಂಕೀರ್ಣವಲ್ಲ, ಅದು ಕಲ್ಲಿನಲ್ಲಿ ಅರಳಿದ ಕಲೆ ಮತ್ತು ನಮ್ಮ ಶ್ರೇಷ್ಠ ಸಂಸ್ಕೃತಿಯ ಪ್ರತೀಕ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತಿನಂತೆ, ಪ್ರತಿಯೊಬ್ಬ ಕನ್ನಡಿಗನೂ ವಿಜಯನಗರ ಸಾಮ್ರಾಜ್ಯದ ವೈಭವಪೂರ್ಣ ಇತಿಹಾಸವನ್ನು ಅರಿಯಬೇಕು ಎಂದು ಹೇಳಿದರು.
ಹಂಪಿಯ ಆಕಾಶದಲ್ಲಿ ಮೂಡಿಬಂದ ಚಿತ್ರಗಳು ನೋಡುಗರಿಗೆ ಅಪಾರ ಸಂತೋಷ ನೀಡಿವೆ. ನಮ್ಮ ಪುರಾತನ ಕಲೆಗೆ ಆಧುನಿಕ ತಂತ್ರಜ್ಞಾನದ ಮೆರುಗು ನೀಡುವ ಮೂಲಕ ಪ್ರವಾಸಿಗರಿಗೆ ಇತಿಹಾಸವನ್ನು ಕಣ್ಣಮುಂದೆ ತರುವ ಪ್ರಯತ್ನ ಮಾಡಲಾಗಿದೆ. ಹಂಪಿ ಉತ್ಸವವು ಕೇವಲ ಮನರಂಜನೆಗಾಗಿ ಅಲ್ಲ, ಬದಲಾಗಿ ಕನ್ನಡಿಗರಲ್ಲಿ ತಮ್ಮ ನಾಡು, ಇತಿಹಾಸ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶ ಹೊಂದಿದೆ ಎಂದರು.
ವಿಜಯನಗರದ ಆರ್ಥಿಕ ಸಮೃದ್ಧಿಯನ್ನು ನೆನಪಿಸಿದ ಸಚಿವರು, “ಅಂದು ಹಂಪಿಯ ಮಾರುಕಟ್ಟೆಗಳಲ್ಲಿ ಮುತ್ತು, ರತ್ನ ಮತ್ತು ವಜ್ರಗಳನ್ನು ಸೇರುಗಳಲ್ಲಿ ಅಳೆದು ಮಾರಲಾಗುತ್ತಿತ್ತು ಎಂಬುದು ಐತಿಹಾಸಿಕ ಸತ್ಯ. ಅಷ್ಟು ಎತ್ತರಕ್ಕೆ ಬೆಳೆದಿದ್ದ ನಮ್ಮ ಸಂಸ್ಕೃತಿ ಕೇವಲ ಸಂಪತ್ತಿಗೆ ಸೀಮಿತವಾಗಿರಲಿಲ್ಲ. ಅಂದಿನ ಅರಸರು ಜೈನರು ಮತ್ತು ವೈಷ್ಣವರ ನಡುವಿನ ವಿವಾದಗಳನ್ನು ಬಗೆಹರಿಸಿ, ಸರ್ವ ಜನಾಂಗದ ಶಾಂತಿಯ ತೋಟವಾಗಿ ನಾಡನ್ನು ರಕ್ಷಿಸಿದ್ದರು.ಆ ಸಾಮರಸ್ಯದ ಗುಣ ಇಂದಿನ ಸಮಾಜಕ್ಕೂ ಮಾದರಿ ಎಂದು ಸಚಿವ ಹೆಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ರಾಜ್ಯದ ಎಲ್ಲ ಉತ್ಸವಗಳಿಗೆ ಹಂಪಿ ಉತ್ಸವ ಮಾದರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಂಪಿ ಹೆಸರಾಗಿದೆ. ಕಲೆ,ಸಾಹಿತ್ಯ,ಸಂಸ್ಕೃತಿ,ವಾಸ್ತುಶಿಲ್ಪ,ಆಡಳಿತದಲ್ಲಿ ವಿಜಯನಗರ ಸಾಮ್ರಾಜ್ಯದ ಕೊಡುಗೆ ಮಹೋನ್ನತವಾಗಿದೆ. ಕರ್ನಾಟಕ ಎಂದು ನಾಡಿಗೆ ನಾಮಕರಣ ಮಾಡಿ, 50 ವರ್ಷ ಸಂದ ಹಿನ್ನಲೆಯಲ್ಲಿ ಹಂಪಿಯಿAದ ಆರಂಭಿಸಿ ನಾಡಿನಾದ್ಯಂತ 1 ವರ್ಷಗಳ ಕಾಲ ಸಾಂಸ್ಕೃತಿಕ ಕಾಯಕ್ರಮಗಳನ್ನು ಸರ್ಕಾರದಿಂದ ಆಯೋಜಿಸಲಾಗಿತ್ತು. ತುಂಗಭದ್ರಾ ಅಣೆಕೆಟ್ಟಿನ ಒಂದು ಗೇಟ್ ಹೊಡೆದಾಗ, ತಕ್ಷಣವಾಗಿ ದುರಸ್ಥಿ ಕಾರ್ಯಮಾಡಿ ಈ ಭಾಗದ ರೈತರ ಹಿತವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕಾಪಾಡಿದ್ದಾರೆ. ಇಂದು ಹಂಪಿ ಉತ್ಸವ ಮೂಲಕ ರಾಜ್ಯ ಹಾಗೂ ಅಂತರಾಷ್ಟಿಯ ಮಟ್ಟದ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದೆ ಎಂದರು.
ಸಂಸದ ಇ.ತುಕಾರಾಂ ಮಾತನಾಡಿ, ಹಂಪಿಯ ಇತಿಹಾಸ ಮುಂದಿನ ಪೀಳಿಗೆ ಮಾದರಿಯಾಗಬೇಕು. ಇತಿಹಾಸ ಪರಂಪರೆ ಮುಂದುವರೆಯಬೇಕು ಎಂದು 1986 ರಲ್ಲಿ ಮಾಜಿ ಮುಖ್ಯಮತ್ರಿ ಎಂ.ಪಿ.ಪ್ರಕಾಶ್ ಹಂಪಿ ಉತ್ಸವ ಆರಂಭಿಸಿದರು. ಪ್ರತಿಯೊಬ್ಬರು ವಿಜಯನಗರದ ಇತಿಹಾಸ ತಿಳಿದುಕೊಳ್ಳಬೇಕು. ಮಾಧ್ಯಮಗಳ ಮೂಲಕ ಜನರಿಗೆ ಇತಿಹಾಸ ತಿಳಿಸಲಾಗುತ್ತಿದೆ. ಕ್ರಿ.ಶ.1336 ರಿಂದ 1640 ವರಗೆ 310 ವರ್ಷಗಳ ವಿಜಯನಗರ ಸಾಮ್ರಾಜ್ಯ ಗತ ವೈಭವನ್ನು ಹೊಂದಿತ್ತು. ಇದರಲ್ಲಿ ಕ್ರಿ.ಶ.1509 ರಿಂದ 1529 ವರಗೆ ಕೃಷ್ಣದೇವರಾಯನ ಕಾಲ ಸುವರ್ಣಯುಗ ಎನಸಿದೆ. ಇಂದು ಹಂಪಿ ಯುನಿಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ. ಕೃಷ್ಣದೇವರಾಯರಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಹ ನಾಡಿನಲ್ಲಿ ಸುವರ್ಣ ಯುಗ ತಂದಿದ್ದಾರೆ. 2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜನರಿಗೆ ನೀಡಿದ 165 ಭರವಸೆಗಳನ್ನು ಈಡಿರಿಸಿತ್ತು. ಸದ್ಯ ಪಂಚಗ್ಯಾರoಟಿ ಯೋಜನೆಗಳ ಜೊತೆಗೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಿದ್ದೇವೆ.
ಶಾಸಕ ಹೆಚ್.ಆರ್.ಗವಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿಗಳಾದ ಎಂ.ಪಿ.ಪ್ರಕಾಶ್ ಅವರ ಆಶಯದಂತೆ ಪ್ರತಿ ವರ್ಷವೂ ಹಂಪಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಹಂಪಿ ಉತ್ಸವಕ್ಕೆ ಅದ್ದೂರಿ ಕಳೆ ತಂದಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಹಂಪಿ ಉತ್ಸವಕ್ಕೆ ಅಗತ್ಯವಾದ ಅನುದಾನ ನೀಡುತ್ತಾ ಬಂದಿದ್ದಾರೆ. ಹಂಪಿ ಉತ್ಸವ ಮುಂದೆಯೂ ನಿರಂತರವಾಗಿ ನಡೆಯಲಿದೆ ಎಂದರು.
ನಟ ಶಿವರಾಜಕುಮಾರ್ ಮಾತನಾಡಿ ಹಂಪಿಯೊAದಿಗೆ ಅವಿನಾಭ ಸಂಬoಧವಿದೆ. ಮುಖ್ಯಮಂತ್ರಿಗಳು ಹಾಗೂ ಸಚಿವರ ಕರೆಯ ಮೇರೆಗೆ ಉತ್ಸವಕ್ಕೆ ಆಗಮಿಸಿದ್ದೇನೆ. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಾರ್ವಜನಿಕರನ್ನು ರಂಜಿಸುವುದಾಗಿ ಹೇಳಿದರು.
ನಿರ್ಮಾಪಕಿ ಅಶ್ವಿನಿ ಪುನಿತ್ ರಾಜ್‌ಕುಮರ್ ಮಾತನಾಡಿ ಐತಿಹಾಸಿಕ ಹಂಪಿ ಉತ್ಸವ ನಮ್ಮೆಲ್ಲರ ಹೆಮ್ಮೆ. ದೇಶದ ಕಲೆ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಂಪಿ ಉತ್ಸವ ವೇದಿಕೆಯಾಗಿದೆ. ನಾಡಿನ ಗತ ವೈಭವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಟ ಶಿವರಾಜ ಕುಮಾರ್ ಬೆಳಕಿ ದೀವಟಿಗೆ ಹಿಡಿದು ಚಾಲನೆ ನೀಡಲಾಯಿತು. ಇತ್ತೀಚೆಗೆ ಗಾಧಿಗನೂರಿನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಕುಟುಂಬದವರಿಗೆ ರೂ.5 ಲಕ್ಷಗಳ ಪರಿಹಾರದ ಚೆಕ್‌ನ್ನು ವೇದಿಕೆಯಲ್ಲಿ ನೀಡಲಾಯಿತು.
ನಗರಾಭಿವೃದ್ಧಿ ಸಚಿವ ಬಿ.ಎ.ಸುರೇಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಮ್.ರೇವಣ್ಣ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್,ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾ.ರಾ.ಭರತರೆಡ್ಡಿ, ಕೂಡ್ಲಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಹಡಗಲಿ ಶಾಸಕ ಕೃಷ್ಣಾನಾಯಕ್, ಹಗರಿಬೊಮ್ಮನಹಳ್ಳಿ ಶಾಸಕ ನೇಮರಾಜ್ ನಾಯಕ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






