ವೈಟ್‌ಫೀಲ್ಡ್‌ನಲ್ಲಿ 10 ಕಿ.ಮೀ ಪಾದಚಾರಿ ನಡಿಗೆ – 120ಕ್ಕೂ ಹೆಚ್ಚು ನಾಗರಿಕರ ಭಾಗಿ
ಬೆಂಗಳೂರು, ಮಾರ್ಚ್ 01:ಮಹದೇವಪುರ ವಲಯದಲ್ಲಿ ಮುಂದಿನ ಎರಡು ತಿಂಗಳೊಳಗಾಗಿ 50 ಕಿ.ಮೀ ಉದ್ದದ ಸುರಕ್ಷಿತ ಹಾಗೂ ಸುಗಮ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲು *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಫೀನಿಕ್ಸ್ ಮಾಲ್‌ನಿಂದ ಹೋಪ್ ಫಾರ್ಮ್ ವರೆಗೆ 10 ಕಿ.ಮೀ ದೂರ ಹಮ್ಮಿಕೊಳ್ಳಲಾದ ಪಾದಚಾರಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮೆಟ್ರೋ ಮಾರ್ಗ ಹೊಂದಿರುವ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿಗೆ ಆದ್ಯತೆ ನೀಡಿದರೆ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪಾದಚಾರಿ ಮಾರ್ಗಗಳಲ್ಲಿನ ಅಡೆತಡೆಗಳು, ರಸ್ತೆ ವಿಸ್ತರಣೆ ಸಮಸ್ಯೆಗಳು ಹಾಗೂ ಇತರೆ ಅಡಚಣೆಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಿ ಜನರು ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದರು. ಪಾದಚಾರಿ ಮಾರ್ಗ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಒದಗಿಸಲಾಗುವುದು. ಅಗತ್ಯವಿದ್ದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವದ ಮೂಲಕ ಕೆಲಸಗಳನ್ನು ವೇಗಗೊಳಿಸುವಂತೆ ನಿರ್ದೇಶನ ನೀಡಿದರು.
*ಮೌಲ್ಯಮಾಪನ ವರದಿ ಸಲ್ಲಿಸಿ:*
ಮಹದೇವಪುರ ವಲಯದಲ್ಲಿ ಕೈಗೆತ್ತಿಕೊಳ್ಳುವ 50 ಕಿ.ಮೀ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಹಂತ ಹಂತವಾಗಿ ಮೌಲ್ಯಮಾಪನ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಕಾಮಗಾರಿಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
*11ನೇ ಪಾದಚಾರಿ ನಡಿಗೆ:*
‘ಪ್ರಾಜೆಕ್ಟ್ ವಾಕಲೂರು’ ಅಡಿಯಲ್ಲಿ ಪಾದಚಾರಿ ನಡಿಗೆ ಕಾರ್ಯಕ್ರಮವು ನವೆಂಬರ್ 1ರಂದು ಪ್ರಾರಂಭಗೊಂಡಿದೆ. ಶಿವಾಜಿನಗರ (11 ಕಿ.ಮೀ), ಕೊರಮಂಗಲ (5 ಕಿ.ಮೀ), ಜಯನಗರ (5 ಕಿ.ಮೀ), ಬಾನಸವಾಡಿ (5 ಕಿ.ಮೀ), ತಣಿಸಂದ್ರ (8 ಕಿ.ಮೀ), ಯಲಹಂಕ (10 ಕಿ.ಮೀ), ಬೆಂಗಳೂರು ದಕ್ಷಿಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಒಟ್ಟು 88 ಕಿ.ಮೀ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಲಾಗಿದೆ. ಇಂದಿನ ನಡಿಗೆ 11ನೇ ಕಾರ್ಯಕ್ರಮವಾಗಿದ್ದು, ಮುಂದಿನ ತಿಂಗಳಲ್ಲಿ ಒಟ್ಟು 100 ಕಿ.ಮೀ ನಡಿಗೆ ನಡೆಸುವ ಗುರಿ ಹೊಂದಲಾಗಿದೆ.
*ಪರಿಶೀಲನೆಯಲ್ಲಿ ಗುರುತಿಸಿದ ಅಂಶಗಳು:*
ಇಂದು ನಡೆದ ಪಾದಚಾರಿ ನಡಿಗೆಯಲ್ಲಿ 120ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದರು. ಫೀನಿಕ್ಸ್ ಮಾಲ್‌ನಿಂದ ಹೋಪ್ ಫಾರ್ಮ್‌ವರೆಗೆ ಮೆಟ್ರೋ ಪರ್ಪಲ್ ಲೈನ್ ಮಾರ್ಗದ ಸತತ 10 ಕಿ.ಮೀ ಪಾದಚಾರಿ ಮಾರ್ಗವನ್ನು ಪರಿಶೀಲಿಸಲಾಯಿತು.
*ಪರಿಶೀಲನೆಯ ವೇಳೆ:*
* 10 ಸ್ಥಳಗಳಲ್ಲಿ ಸ್ಲ್ಯಾಬ್‌ಗಳ ದುರಸ್ತಿ
* 2 ಸ್ಥಳಗಳಲ್ಲಿ ಅನಧಿಕೃತ ವಾಹನ ಪಾರ್ಕಿಂಗ್
* 1 ಸ್ಥಳದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು ಇರುವುದು
* 1 ಸ್ಥಳದಲ್ಲಿ ಅನಧಿಕೃತ ಒತ್ತುವರಿ
* 4 ಸ್ಥಳಗಳಲ್ಲಿ ಬೆಸ್ಕಾಂ ಸಂಬಂಧಿತ ತಾಂತ್ರಿಕ ಸಮಸ್ಯೆಗಳು
ಮೇಲೆ ಗುರುತಿಸಲಾದ ಎಲ್ಲಾ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
10 ಕಿ.ಮೀ ಉದ್ದ ಪರಿಶೀಲಿಸಿದ ಪಾದಚಾರಿ ಮಾರ್ಗವು ಬಹುತೇಕ ಸ್ವಚ್ಛವಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲಕರವಾಗಿದೆ ಎಂಬುದನ್ನು ಗಮನಿಸಲಾಯಿತು.
ಪರಿಶೀಲನಾ ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ರಮೇಶ್ ಡಿ.ಎಸ್., ಅಭಿವೃದ್ಧಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ನಾಗರಿಕರು ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.





