ಬೆಂಗಳೂರು: ಯೋಗ ಶಿಕ್ಷಣ ಹಾಗೂ ಸಮಾಜ ಸೇವೆಯ ಮೂಲಕ ಅನೇಕ ಜನರ ಆರೋಗ್ಯ ಮತ್ತು ಜೀವನದಲ್ಲಿ ಉತ್ತಮ ಬದಲಾವಣೆ ತರಲು ಶ್ರಮಿಸುತ್ತಿರುವವರು ಶ್ರೀಮತಿ ರತ್ನ ವೆಂಕಟೇಶ್. ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ತಂದೆ ಲಕ್ಷ್ಮಣ್ ಹಾಗೂ ತಾಯಿ ಕಮಲಮ್ಮ ಅವರ ಮೊದಲ ಪುತ್ರಿಯಾಗಿ ಜನಿಸಿದ ಅವರು ಸರಳ ಕುಟುಂಬದಲ್ಲಿ ಬೆಳೆದವರು.

ಶ್ರೀಮತಿ ರತ್ನ ವೆಂಕಟೇಶ್ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ 10ನೇ ತರಗತಿಯನ್ನು ಉತ್ತೀರ್ಣರಾದರು. ನಂತರ ಅವರ ವಿವಾಹ ನಡೆದರೂ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗದೆ ಮುಂದುವರಿಯಿತು. ಆರೋಗ್ಯ ಮತ್ತು ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಅವರು ಯೋಗದಲ್ಲಿ ಡಿಪ್ಲೋಮಾ, ಎಂಎಸ್ಸಿ (ಯೋಗ), ಎಂಎ (ಯೋಗ) ಪದವಿಗಳನ್ನು ಪಡೆದರು. ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಆಕ್ಯುಪ್ರೆಶರ್, ಆಕ್ಯುಪಂಚರ್ ಹಾಗೂ ನೇಚರೋಪತಿ ಡಿಪ್ಲೋಮಾಗಳನ್ನು ಸಹ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಸುಗಮ ಸಂಗೀತವನ್ನೂ ಅಭ್ಯಾಸ ಮಾಡಿರುವುದು ಅವರ ಮತ್ತೊಂದು ವಿಶೇಷತೆ.

ಸಮಾಜ ಸೇವೆಯ ಹಾದಿಯಲ್ಲಿ ಸಾಗಿದ ಅವರು ಸಾವಿತ್ರಿಬಾಯಿ ಫುಲೆ ಸಂಸ್ಥೆಯ ರಾಜ್ಯಾಧ್ಯಕ್ಷರಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆರೋಗ್ಯಕರ ಜೀವನ ಶೈಲಿಯನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಅವರು ಬೆಂಗಳೂರಿನ ಅನೇಕ ವಿದ್ಯಾಸಂಸ್ಥೆಗಳು, ಟ್ರಸ್ಟ್ಗಳು, ಅನಾಥಾಶ್ರಮಗಳು ಹಾಗೂ ವಿವಿಧ ಸಂಘಟನೆಗಳಲ್ಲಿ ಯೋಗ ತರಗತಿಗಳನ್ನು ನಡೆಸುತ್ತಾ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಸ್ತುತ ಅವರು ವರ್ಲ್ಡ್ ಕಮ್ಯುನಿಟಿ ಸರ್ವೀಸ್ ಸೆಂಟರ್ (WCSC) ಸಂಸ್ಥೆಯಲ್ಲಿ ಸೀನಿಯರ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಯೋಗ ಹಾಗೂ ಆರೋಗ್ಯ ಶಿಕ್ಷಣದ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.
ಅವರ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ವಿಶ್ವ ಸಮುದಾಯ ಸೇವಾ ಸಂಘದಿಂದ “ಬೆಸ್ಟ್ ಟೀಚರ್ ಅವಾರ್ಡ್” ನೀಡಿ ಸನ್ಮಾನಿಸಲಾಗಿದೆ.
ಬಹುಜನ ಭೀಮರಾವ್ ಸೇನೆ ಸಂಸ್ಥೆಯಿಂದ ಎರಡು ಬಾರಿ “ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ಇದೇ ರೀತಿ ಕರುನಾಡ ನಿಧಿ ಪತ್ರಿಕೆಯ ವತಿಯಿಂದ “ಕರುನಾಡ ನಿಧಿ ರಾಜ್ಯ ಪ್ರಶಸ್ತಿ”, “ರವಿ ಬೆಳೆಗೆರೆ ರಾಜ್ಯ ಪ್ರಶಸ್ತಿ”, “ಜಯ ವಿಜಯ ರಾಜ್ಯ ಪ್ರಶಸ್ತಿ” ಹಾಗೂ “ಕರುನಾಡ ಕಿರಣ ರಾಜ್ಯ ಪ್ರಶಸ್ತಿ”ಗಳನ್ನು ನೀಡಿ ಸನ್ಮಾನಿಸಲಾಗಿದೆ. ಗ್ಲೋಬಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”, “ಶಿಕ್ಷಣ ಸೇವಾ ರತ್ನ ಪ್ರಶಸ್ತಿ” ಮತ್ತು “ಕರ್ನಾಟಕ ಸೇವಾ ರತ್ನ ಪ್ರಶಸ್ತಿ”ಗಳನ್ನು ನೀಡಲಾಗಿದೆ.
ವೈಷ್ಣವಿ ಫೌಂಡೇಶನ್ ವತಿಯಿಂದ “ಕರುನಾಡ ತಿಲಕ ರಾಜ್ಯ ಪ್ರಶಸ್ತಿ”, ಬಾಪೂಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ “ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ” ಹಾಗೂ ಮಹರ್ಷಿ ವಾಲ್ಮೀಕಿ ಫೌಂಡೇಶನ್ ವತಿಯಿಂದ “ರಾಜ್ಯ ವಾಲ್ಮೀಕಿ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ. ಇದಲ್ಲದೆ ಹಲವು ಸಂಘ ಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿವೆ.
ಯೋಗ ಶಿಕ್ಷಣ, ಆರೋಗ್ಯ ಜಾಗೃತಿ ಮತ್ತು ಸಮಾಜ ಸೇವೆ ಮೂಲಕ ಜನರ ಜೀವನದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿರುವ ಶ್ರೀಮತಿ ರತ್ನ ವೆಂಕಟೇಶ್ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ.






