ಬೆಂಗಳೂರು, ಜ.29: ನಗರದ ದಿ ಚಾನ್ಸರಿ ಪೆವಿಲಿಯನ್ ನಲ್ಲಿ ಗುರುವಾರ ನಡೆದ ಎಜುಕೇಶನ್ ಎಕ್ಸಲೆನ್ಸ್ ಕಾನ್ಕ್ಲೇವ್ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ ಗಮನಾರ್ಹ ಸಮಾರಂಭವಾಗಿತ್ತು. ದೇಶದಾದ್ಯಂತ ಶಿಕ್ಷಣದಲ್ಲಿ ಹೊಸತನ ಮತ್ತು ಗುಣಮಟ್ಟದ ಸಾಧನೆಗಳನ್ನು ಗುರುತಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾನ್ಕ್ಲೇವ್‌ನಲ್ಲಿ ಹಲವು ಶಿಕ್ಷಣ ತಜ್ಞರು, ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅತಿಥಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಇಕ್ರ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮೊಹಮ್ಮದ್ ನಝೀರ್ ಅವರಿಗೆ “Rabindranath Tagore National Chairpersons’ Award” ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸೇವೆ, ವಿದ್ಯಾರ್ಥಿ ಕೇಂದ್ರಿತ ಕಾರ್ಯಪದ್ಧತಿ ಹಾಗೂ ಸಮುದಾಯಮುಖಿ ಶಿಕ್ಷಣದ ಉತ್ತೇಜನವನ್ನು ಪರಿಗಣಿಸಿ ಈ ರಾಷ್ಟ್ರೀಯ ಗೌರವ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪುರಸ್ಕಾರ ಸ್ವೀಕರಿಸಿದ ನಂತರ ಮಾತನಾಡಿದ ನಜೀರ್ ಅಹಮದ್ ಅವರು, ಗುಣಮಟ್ಟದ ಶಿಕ್ಷಣವು ಸಮಾಜದ ಸಮಗ್ರ ಅಭಿವೃದ್ಧಿಗೆ ಮೂಲವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಕಾಶಗಳ ಸಮಾನತೆ ಸಿಗುವಂತೆ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಇಕ್ರಾ ಸಂಸ್ಥೆ ಮೂಲಕ ಶೈಕ್ಷಣಿಕ ಹಾಗೂ ನೈತಿಕ ಮೌಲ್ಯಗಳ ಸಮನ್ವಯಕ್ಕೆ ಒತ್ತು ನೀಡಲಾಗುತ್ತಿದೆ ಎಂದೂ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಆಹ್ವಾನಿತ ಅತಿಥಿಗಳು ಉಪಸ್ಥಿತರಿದ್ದು, ಶಿಕ್ಷಣ ಕ್ಷೇತ್ರದ ಸವಾಲುಗಳು ಹಾಗೂ ಭವಿಷ್ಯದ ದಿಕ್ಕುಗಳ ಕುರಿತು ಚರ್ಚೆ ನಡೆಸಿದರು. ಸಮಾರಂಭವು ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು.






