ಬೆಂಗಳೂರು, ಜೂನ್6: ಶುಕ್ರವಾರ 5ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅತ್ತಿಗುಪ್ಪೆ ಸರ್ಕಾರಿ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿಎಂ ಗಣೇಶ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪರಿಸರದ ಮಹತ್ವ ಹಾಗೂ ಅದನ್ನು ಸಂರಕ್ಷಿಸುವ ಅಗತ್ಯತೆಯ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ತಿಳಿಸಿದರು.
ಪರಿಸರ ಮಾಲಿನ್ಯ ತಡೆಗಟ್ಟುವ ಕ್ರಮಗಳು, ಮರಗಳ ಸಂರಕ್ಷಣೆ, ನೀರಿನ ಉಳಿತಾಯ ಹಾಗೂ ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ರಕ್ಷಣೆಗಾಗಿ ಎಲ್ಲರೂ ಕೈಜೋಡಿಸಬೇಕು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಿ ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಸ್ಥೆಯ ಪರಿಸರ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ, ಯಶಸ್ವಿಯಾಗಿ ನಡೆಸಿಕೊಟ್ಟರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿ, ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವು ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.






