ಬೆಂಗಳೂರು, ಸೆ.23: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಜನತಾದಳ (ಜಾತ್ಯತೀತ) ಪಕ್ಷದ 155-ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಶ್ರೀ ಫೈಜಲ್ ಅಹಮದ್ (ಮೂಸಾ) ಅವರನ್ನು ನೇಮಕ ಮಾಡಲಾಗಿದೆ.
ದಿನಾಂಕ 21ರಂದು ಈ ನೇಮಕಾತಿ ಆದೇಶವನ್ನು ಜಾರಿಗೊಳಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಅಫ್ರೋಜ್ ಬೇಗ್ ಅವರು ಫೈಜಲ್ ಅಹಮದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.
ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವ ಜವಾಬ್ದಾರಿಯನ್ನು ಫೈಜಲ್ ಅಹಮದ್ ಅವರಿಗೆ ನೀಡಲಾಗಿದೆ. ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗವನ್ನು ಮತ್ತಷ್ಟು ಸಂಘಟಿಸಿ, ಪಕ್ಷದ ಚಟುವಟಿಕೆಗಳನ್ನು ಕ್ಷೇತ್ರದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅಫ್ರೋಜ್ ಬೇಗ್ ಆಶಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರು ನಾರ್ತ್ ಜೆಡಿಎಸ್ ಅಧ್ಯಕ್ಷರಾದ ಮೊಹಮ್ಮದ್ ಅಮ್ಜದ್ ಅವರ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಸಂಘಟನೆ ಬಲಪಡಿಸುವುದು ಹಾಗೂ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಕರ್ತರನ್ನು ಒಗ್ಗೂಡಿಸುವ ಕುರಿತು ಮುಖಂಡರು ಹಾಗೂ ಕಾರ್ಯಕರ್ತರು ಚರ್ಚಿಸಿದರು.
ಫೈಜಲ್ ಅಹಮದ್ ಅವರ ನೇಮಕಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ, ಅವರ ನೇತೃತ್ವದಲ್ಲಿ ದಾಸರಹಳ್ಳಿ ಕ್ಷೇತ್ರದ ಅಲ್ಪಸಂಖ್ಯಾತರ ವಿಭಾಗ ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.






