ಬೆಂಗಳೂರು, ಜೂನ್ 15: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಹಂತವಾದ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ಈಗಾಗಲೇ ಶೇ.91ರಷ್ಟು ಕಾರ್ಯ ಪೂರ್ಣಗೊಂಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, 2025ರ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ 5.55 ಕೋಟಿ ಮತದಾರರ ಪೈಕಿ 5.01 ಕೋಟಿ ಮತದಾರರ ಮ್ಯಾಪಿಂಗ್ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಭರ್ತಿ ಮಾಡುವ ಅಧಿಕೃತ ಪ್ರಕ್ರಿಯೆ ಆರಂಭವಾಗಲು ಇನ್ನೂ ಎರಡು ವಾರಗಳ ಕಾಲಾವಕಾಶವಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮ್ಯಾಪಿಂಗ್ ಕಾರ್ಯವು ಶೇ.90ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಪೂರ್ಣಗೊಂಡಿದೆ. ದಕ್ಷಿಣ ಕನ್ನಡ, ರಾಯಚೂರು, ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ 28 ಜಿಲ್ಲೆಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
ಮ್ಯಾಪಿಂಗ್ ಕಾರ್ಯದಲ್ಲಿ ಕೊಡಗು ಜಿಲ್ಲೆ ಶೇ.98.54ರಷ್ಟು ಸಾಧನೆ ಮಾಡಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಶೇ.97ಕ್ಕಿಂತ ಹೆಚ್ಚು ಪ್ರಗತಿ ದಾಖಲಾಗಿದೆ.
ಮಂಡ್ಯ, ಯಾದಗಿರಿ, ಕಲಬುರಗಿ, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ.96ಕ್ಕಿಂತ ಅಧಿಕ ಮ್ಯಾಪಿಂಗ್ ಆಗಿದ್ದು, ದಾವಣಗೆರೆ, ಕೊಪ್ಪಳ, ತುಮಕೂರು, ಹಾಸನ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಶೇ.95ಕ್ಕಿಂತ ಹೆಚ್ಚು ಕಾರ್ಯ ಪೂರ್ಣಗೊಂಡಿದೆ.
ಇನ್ನೊಂದೆಡೆ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಶೇ.94, ವಿಜಯನಗರ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಶೇ.93ಕ್ಕಿಂತ ಅಧಿಕ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ.92ರಷ್ಟು ಮ್ಯಾಪಿಂಗ್ ನಡೆದಿದೆ.
ಬೀದರ್ ಜಿಲ್ಲೆಯಲ್ಲಿ ಶೇ.91, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಶೇ.90ರಷ್ಟು ಕಾರ್ಯ ಪೂರ್ಣಗೊಂಡಿದೆ.
ನಗರ ಪ್ರದೇಶಗಳಲ್ಲಿ ಮ್ಯಾಪಿಂಗ್ ಪ್ರಮಾಣ ತುಸು ಕಡಿಮೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.89, ರಾಯಚೂರು ಜಿಲ್ಲೆಯಲ್ಲಿ ಶೇ.88 ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.79ರಷ್ಟು ಮ್ಯಾಪಿಂಗ್ ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ತರ ವಲಯದಲ್ಲಿ ಶೇ.71.71, ಕೇಂದ್ರ ವಲಯದಲ್ಲಿ ಶೇ.70 ಹಾಗೂ ದಕ್ಷಿಣ ವಲಯದಲ್ಲಿ ಶೇ.70ರಷ್ಟು ಕಾರ್ಯ ಪೂರ್ಣಗೊಂಡಿದೆ.
ಚುನಾವಣಾ ಆಯೋಗದ ಅಧಿಕಾರಿಗಳು, ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಮ್ಯಾಪಿಂಗ್ ಮತ್ತು ಮನೆ-ಮನೆ ಭೇಟಿ ಕಾರ್ಯಗಳನ್ನು ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.






