ಗುಡಿಬಂಡೆ: ರಜೆ ಸಮಯವನ್ನು ವ್ಯರ್ಥ ಮಾಡದೆ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ನಡೆಸುತ್ತಿರುವ 10 ದಿನಗಳ ಬೇಸಿಗೆ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು. ಬೇಸಿಗೆ ಶಿಬಿರದಲ್ಲಿ ದೊರೆಯುವ ವಿವಿಧ ಕೌಶಲಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ಕುಮಾರಿ ಹೇಳಿದರು.
ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 10 ದಿನಗಳ ಕಾಲದ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಷ್ಟು ದಿನ ಶಾಲೆಯಲ್ಲಿ ಬೆಳಿಗ್ಗೆ ಯಿಂದ ಸಂಜೆ ವರೆಗೆ ತರಗತಿಗೆ ಸಂಬಂಧಿಸಿದ ಪಾಠವನ್ನು ಕಲಿಯುತ್ತಿದ್ದರು. ಈಗ ನೃತ್ಯ, ಹಾಡು, ಕಥೆ, ಕರಾಟೆ ಸೇರಿದಂತೆ 15 ಕ್ಕೂ ಹೆಚ್ಚು ವಿವಿಧ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ಕಲಿಸುತ್ತಾರೆ.
ನೀವು ಕಲಿಯಿರಿ ನಿಮ್ಮ ಸ್ನೇಹಿತರನ್ನು ಶಿಬಿರಕ್ಕೆ ಕರೆತನ್ನಿ. ತಾಲ್ಲೂಕಿನ ಗ್ರಾಮೀಣ ಭಾಗವಾದ ಸೋಮೇನಹಳ್ಳಿ ಪಿ.ಎಂ ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಟ್ಟಣ ಪ್ರದೇಶದಲ್ಲಿ ಗುಡಿಬಂಡೆ ಪಿ.ಎಂ. ಶ್ರೀ ಶಾಲೆಗಳು ಆಯ್ಕೆ ಮಾಡಿಕೊಂಡಿದ್ದೇವೆ. ನುರಿತ ಶಿಕ್ಷಕರು ತರಬೇತಿ ನೀಡುತ್ತಾರೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಪಟ್ಟಣ ಪಂಚಾಯತಿ ನಾಮ ನಿರ್ದೇಶನ ಸದಸ್ಯ ಅಂಬರೀಶ್, ಬಿ.ಆರ್.ಸಿ ಸಂಯೋಜಕ ರಾಘವೇಂದ್ರ, ಇಸಿಓ ನಂಜುಂಡಪ್ಪ, ಟಿಪಿಓ ಆಂಜಿನಪ್ಪ, ಉರ್ದು ಸಾಹಿತ್ಯ ಪರಿಷತ್ತಿನ ಮಹ್ಮದ್ ನಾಸೀರ್, ಪತ್ರಕರ್ತರ ಬಿ. ಸುರೇಶ್ ಬಾಬು, ಶಾಲೆಯ ಮುಖ್ಯ ಶಿಕ್ಷಕ ಶಂಕರ್, ಸಹ ಶಿಕ್ಷಕರು ಭಾಗವಹಿಸಿದ್ದರು.






