ಬೆಂಗಳೂರು, ಏಪ್ರಿಲ್ 26 : ಬೆಂಗಳೂರು ಲಾಂಗ್ ಇಯರ್ ಗೋಟ್ ಬ್ರೀಡರ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾದ “ರೈತೋತ್ಸವ 2026” ರಾಷ್ಟ್ರೀಯ ಮಟ್ಟದ ದೀರ್ಘ ಕಿವಿಯ ಮೇಕೆ ಪ್ರದರ್ಶನ ಹಾಗೂ ಹೆವಿವೇಟ್ ಕುರಿ–ಮೇಕೆ ಚಾಂಪಿಯನ್‌ಶಿಪ್ ಭಾನುವಾರ ಬೆಂಗಳೂರಿನ ಹೆಬ್ಬಾಳದಲ್ಲಿರುವ ವೆಟರಿನರಿ ಕಾಲೇಜಿನ ಬಾಯ್ಸ್ ಹಾಸ್ಟೆಲ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಮಹತ್ವದ ಕಾರ್ಯಕ್ರಮವು ದೇಶದ ವಿವಿಧ ಭಾಗಗಳಿಂದ ಬಂದ ಮೇಕೆ ಹಾಗೂ ಕುರಿ ಸಾಕಾಣಿಕೆದಾರರು, ರೈತರು ಮತ್ತು ಪಶುಪಾಲನಾ ಆಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿತು. ಉತ್ತಮ ಜಾತಿಯ ಪ್ರಾಣಿಗಳ ಪ್ರದರ್ಶನ, ಸ್ಪರ್ಧೆಗಳು ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದ ಹೊಸ ಮಾಹಿತಿಗಳ ವಿನಿಮಯ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಲಾಂಗ್-ಇಯರ್ ಮೇಕೆ ಎಕ್ಸ್‌ಪೋ, ಹೆವಿವೇಟ್ ಕುರಿ ಮತ್ತು ಮೇಕೆಗಳ ಚಾಂಪಿಯನ್‌ಶಿಪ್, ವಿವಿಧ ಜಾತಿಗಳ ಪ್ರದರ್ಶನ ಹಾಗೂ ಸ್ಪರ್ಧೆಗಳು ನಡೆಯಿತು. ದೇಶದ ವಿವಿಧ ಭಾಗಗಳಿಂದ ಬಂದ ಪ್ರಮುಖ ಬ್ರೀಡರ್‌ಗಳು ತಮ್ಮ ಅತ್ಯುತ್ತಮ ಮೇಕೆ ಹಾಗೂ ಕುರಿಗಳನ್ನು ಪ್ರದರ್ಶಿಸಿ ಗಮನಸೆಳೆದರು. ವಿಜೇತರಿಗೆ ಪ್ರಶಸ್ತಿಗಳು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರೀಡರ್‌ಗಳು ಹಾಗೂ ರೈತರು ಪರಸ್ಪರ ಸಂಪರ್ಕ ಬೆಳೆಸಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಶುಸಂಗೋಪನೆ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾದ ಜ್ಞಾನ ಹಂಚಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳೂ ನಡೆಯಿತು.
ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಶ್ರೀ ಸೈಯದ್ ಸಿದ್ದೀಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಅಮ್ಜದ್, ಕೆ.ಎಲ್ ಮುಬಾರಕ್ ಚಾನ್, ಸುಹೈಲ್, ಸೈಯದ್ ಕಬೀರ್, ನದೀಮ್ ಪಾಷಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ರಿಜ್ವಾನ್ ಅರ್ಶದ್, ಮಾಜಿ ಕಾರ್ಪೊರೇಟರ್ ಶ್ರೀ ಸೈಯದ್ ಶಕೀಲ್ ಅಹಮದ್, ಸಿಲಿಕಾನ್ ಸಿಟಿ ಕಾಲೇಜ್ ಸಂಸ್ಥಾಪಕರಾದ ಶ್ರೀ ಚಂದ್ರಶೇಖರ್ ಹಾಗೂ ಇನ್ನಿತರ ನಾಯಕರು ಮತ್ತು ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಒಟ್ಟಾರೆ, “ರೈತೋತ್ಸವ 2026” ಪಶುಪಾಲನಾ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬಿದ ಕಾರ್ಯಕ್ರಮವಾಗಿ ಪರಿಣಮಿಸಿದ್ದು, ರೈತರು ಮತ್ತು ಬ್ರೀಡರ್‌ಗಳಿಗೆ ಉಪಯುಕ್ತ ವೇದಿಕೆಯಾಗಿತು.






