ಬೆಂಗಳೂರು, ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಹೆಚ್ಚು ನಿಖರ ಹಾಗೂ ದೋಷರಹಿತವಾಗಿಸಲು ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಮಂಗಳವಾರದಿಂದ ಚಾಲನೆ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಬಿಎಲ್ಒಗಳು ಪ್ರತಿ ಮನೆಗೆ ಭೇಟಿ ನೀಡಿ ಎರಡು ಗಣತಿ (Enumeration) ನಮೂನೆಗಳನ್ನು ನೀಡಲಿದ್ದಾರೆ.
ಮತದಾರರು ಎರಡೂ ನಮೂನೆಗಳನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಬಳಿಕ ಅಧಿಕಾರಿಗಳೂ ಸಹಿ ಮಾಡಿ, ಒಂದು ಪ್ರತಿಯನ್ನು ಮತದಾರರಿಗೆ ಸ್ವೀಕೃತಿ ದಾಖಲೆಯಾಗಿ ನೀಡಲಾಗುತ್ತದೆ. ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ಪಡೆದು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸಲಿದ್ದಾರೆ.
ಈ ವಿಶೇಷ ಪರಿಷ್ಕರಣೆ ವೇಳೆ ಹೊಸ ಮತದಾರರ ಹೆಸರು ಸೇರ್ಪಡೆ, ನಿಧನರಾದವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು, ಎರಡು ಕಡೆ ಹೆಸರು ಹೊಂದಿರುವವರ ದಾಖಲೆಯನ್ನು ಒಂದು ಕಡೆ ಮಾತ್ರ ಉಳಿಸುವುದು ಹಾಗೂ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳಲ್ಲಿ ದೋಷವಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 59,050ಕ್ಕೂ ಹೆಚ್ಚು ಬಿಎಲ್ಒಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, 2026ರ ಮೇ 12ರ ಅಂಕಿ-ಅಂಶಗಳ ಪ್ರಕಾರ 5.55 ಕೋಟಿಗೂ ಅಧಿಕ ಮತದಾರರು ಈ ವಿಶೇಷ ಪರಿಷ್ಕರಣೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಪ್ರಕ್ರಿಯೆಯ ಪಾರದರ್ಶಕತೆಗಾಗಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು ಸಹ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
ಗಣತಿ ನಮೂನೆಗಳ ಪರಿಶೀಲನೆಯ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವುದು ಅಥವಾ ಯಾವುದೇ ಮಾಹಿತಿ ತಪ್ಪಾಗಿದ್ದರೆ ನಿಗದಿತ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಎಸ್ಐಆರ್ ವೇಳಾಪಟ್ಟಿ
ಜೂನ್ 30 – ಜುಲೈ 29: ಮನೆ ಮನೆಗೆ ಭೇಟಿ, ನಮೂನೆ ವಿತರಣೆ ಹಾಗೂ ಸಂಗ್ರಹ
ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ
ಆಗಸ್ಟ್ 5 – ಸೆಪ್ಟೆಂಬರ್ 4: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ
ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟಣೆ
ಮತದಾರರು ಏನು ಮಾಡಬೇಕು?
ಬಿಎಲ್ಒ ನೀಡುವ ಎರಡು ನಮೂನೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಹಿ ಮಾಡಬೇಕು.
ಒಂದು ಪ್ರತಿಯನ್ನು ದಾಖಲೆಯಾಗಿ ತಮ್ಮ ಬಳಿ ಇಟ್ಟುಕೊಂಡು, ಮತ್ತೊಂದು ಪ್ರತಿಯನ್ನು ಅಧಿಕಾರಿಗಳಿಗೆ ಹಿಂತಿರುಗಿಸಬೇಕು.
ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಇತರೆ ಬದಲಾವಣೆಗಳಿದ್ದರೆ ಇದೇ ವೇಳೆ ಅರ್ಜಿ ಸಲ್ಲಿಸಬೇಕು.
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಆಕ್ಷೇಪಣೆ ಸಲ್ಲಿಸಬೇಕು.
ಪ್ರಜಾಪ್ರಭುತ್ವದ ಬಲವಾದ ಅಡಿಪಾಯವಾದ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಅರ್ಹ ಮತದಾರರು ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮನೆಗೆ ಆಗಮಿಸುವ ಬಿಎಲ್ಒಗಳಿಗೆ ಅಗತ್ಯ ಸಹಕಾರ ನೀಡುವಂತೆ ಚುನಾವಣಾ ಅಧಿಕಾರಿಗಳು ಮನವಿ ಮಾಡಿದ್ದಾರೆ.






