ಶ್ರೀದೇವಿ ಓಂಕಾರ್
ನಮಸ್ಕಾರ ಸ್ನೇಹಿತರೇ,
ದೇವರ ಆಟ ಎಷ್ಟು ವಿಚಿತ್ರ ಅನಿಸುತ್ತದೆ.ಸುಂದರ ಪ್ರಕೃತಿ ಸೌಂದರ್ಯದ ಕಾಯಕ ದೇವರದು ಈ ಭೂಮಂಡಲದಲ್ಲಿ ಕೋಟಿ ಕೋಟಿ ಜೀವಿಗಳಿಗೆ ಉಸಿರಾಟ ಕೊಟ್ಟು ಸಲಹುವನು ಆ ದೇವರೇ.ಹೀಗಿರುವಾಗ ಅವನು ಬೇರೆ ಬೇರೆ ದೇಶ ಬೇರೆ ಬೇರೆ ಜನರು, ಗಂಡು ಹೆಣ್ಣು ಎಂಬ ಸೃಷ್ಟಿ ಮಾಡಿ, ಕೆಲವರಿಗೆ ರೂಪವಂತ ರನ್ನಾಗಿ ಮಾಡಿದನು ಕೆಲವರಿಗೆ ಕೂರೂಪಿಯಾಗಿ.
ಕೆಲವರು ಶ್ರೀಮಂತರು, ಕೆಲವರಿಗೆ ಬಡವರೆಂದು ಹೆಸರು ಕೊಟ್ಟು ತುತ್ತು ಅನ್ನಕ್ಕಾಗಿ ಪರಿದಾಡುವಂತೆ ಮಾಡಿದನು.ಇದೆಲ್ಲವನ್ನು ಹೇಗೋ ಸಹಿಸಬಹುದು, ಆದರೆ ಕೆಲವು ತಂದೆ ತಾಯಿಯ ಹೊಟ್ಟೆಯಿಂದ ಅಂಗವಿಕಲತೆ ಇರುವ ಮಕ್ಕಳನ್ನು ಕೊಡುತ್ತಾನೆ ಇದರಿಂದ ಹೆತ್ತವರ ಪಾಡೇನು,ಏನೋ ಸಮಾಧಾನಕ್ಕೆ ಪೂರ್ವ ಜನ್ಮದ ಫಲ ಎಂದು ಹೇಳುತ್ತಾರೆ ಅದು ಎಷ್ಟರಮಟ್ಟಿಗೆ ಸಮರ್ಪಕವಾಗಿ ಇದೆ ಎಂದು ಗೊತ್ತಿಲ್ಲ.ಪೂರ್ವ ಜನ್ಮ ಇದೆ ಎಂದು ಬರೀ ಊಹೆ ಯಾರಿಗೂ ನಿಖರವಾಗಿ ತಿಳಿದಿಲ್ಲ.
ದೇವರು ನಮಗೆ ಸಧೃಡ ದೇಹ ಕರುಣಿಸಿ ಎರಡು ಹೊತ್ತು ಊಟ ಕೊಟ್ಟು ಸಲುಹಿದರೆ ನಮ್ಮಷ್ಟು ಭಾಗ್ಯವಂತರು ಯಾರೂ ಇಲ್ಲ.ಎಲ್ಲಾ ಇದ್ದು ಇನ್ನೂ ಬೇಕೆನ್ನುವುದು ಮನುಜನ ಸಹಜ ಗುಣ, ಆದರೆ ಆಸೆಗಳನ್ನು ಕಡಿಮೆ ಮಾಡಿ ದೇವರು ಕೊಟ್ಟಿರುವುದರಲ್ಲಿ ಸಂತೋಷ ಪಡಬೇಕು, ಕೆಲವರಿಗೆ ಸರಿಯಾಗಿ ಜೀವನ ನಡೆಸಲು ದೇಹದ ಭಾಗ್ಯ ಕೂಡಾ ಇರುವುದಿಲ್ಲ, ಅಂಥವರಿಗೆ ಸಹಾಯ ಮಾಡಿ ಮಾನವೀಯತೆಯಿಂದ ಮೆರೆದ ಒಬ್ಬರ,ಒಂದು ವಿಷಯ ಇಲ್ಲಿದೆ.
ಅಮೇರಿಕಾದಲ್ಲಿ ಒಂದು ತಾಣಕ್ಕೆ ಹೋದಾಗ , ಒಂದು ಘಟನೆ ನನ್ನ ಮನಸ್ಸಿಗೆ ತುಂಬಾ ನಾಟಿತು.ಇಲ್ಲಿ ಪ್ರತಿಯೊಬ್ಬರೂ ಸುಂದರ ಮುಖ ಹೊಂದಿರುವುದೇ ಹೆಚ್ಚು.ಹೀಗೇ ಅಮೇರಿಕಾದಲ್ಲಿ ಸುಂದರ ತಾಣಗಳನ್ನು ನೋಡುತ್ತಾ ಅದರ ಸೊಬಗನ್ನು ಸವಿಯುತ್ತ ಹೊರಟಿದ್ದೆ.ಯಾಕೋ ಬಸ್ನಲ್ಲಿ ಪ್ರಯಾಣ ಮಾಡುವ ಮನಸ್ಸು ಆಯಿತು.
ಅಷ್ಟರಲ್ಲಿ ಬಸ್ ಬಂದಿತು, ತುಂಬಾ ಸುಸಜ್ಜಿತವಾದ ಬಸ್ ಒಳಗಡೆ ಎಲ್ಲಾ ಸೌಲಭ್ಯ ಇತ್ತು.ಬಸ್ನಲ್ಲಿ ಹತ್ತಿ ಹತ್ತು ನಿಮಿಷ ಆದರೂ ಹೊರಡಲಿಲ್ಲ, ಯಾಕೆ ಎಂದು ಮುಂದೆ ಕಣ್ಣಾಡಿಸಿ ನೋಡಿದಾಗ,ಒಬ್ಬ ಅಂಗವಿಕಲ ವ್ಯಕ್ತಿಯನ್ನು ಡ್ರೈವರ್ ತುಂಬಾ ಪ್ರೀತಿಯಿಂದ ಕುಳ್ಳಿರಿಸಿ, ಬೆಲ್ಟ್ ಕಟ್ಟಿ ಅದು ಸರಿಯಾಗಿ ಇದೆಯೇ ಎಂದು ನೋಡಿ ನಂತರ ಬಸ್ ನಡೆಸಲು ಹೋದ, ಆ ಹುಡುಗನ ಜೊತೆ ಬಹುಶಃ ಅವನ ಅಮ್ಮಾ ಅಪ್ಪಾ ಇರಬಹುದು.ಅವರು ಆ ಹುಡುಗನ ಎದುರು ಸ್ಥಾನದಲ್ಲಿ ಕುಳಿತು ಕೊಂಡರು.
ಆ ಡ್ರೈವರ್ ಮಾನವೀಯತೆಯಿಂದ ಮೆರೆದಿದ್ದು ಕಂಡು ತುಂಬಾ ಸಂತೋಷವಾಯಿತು.ಹೀಗೆ ಪ್ರತಿಯೊಬ್ಬರೂ ಅಂಥವರಿಗೆ ಸಹಾಯ ಬೇಕಾದರೆ ಅಸಡ್ಡೆ ತೋರಿಸದೆ, ಸಹಾಯ ಮಾಡಲು ಮುಂದಾದರೆ ಎಷ್ಟು ಚೆಂದ ಅಲ್ಲವೇ ಸ್ನೇಹಿತರೇ.






