ಬೆಂಗಳೂರು, ಜೂನ್ 8: ಬೆಂಗಳೂರಿನ ಟ್ಯಾನ್ರಿ ರಸ್ತೆಯಲ್ಲಿರುವ ಮಸ್ಜಿದ್-ಎ-ಬಿಲಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರಾದ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಾಯಿತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೌಲಾನಾ ಜುಲ್ಫಿಕಾರ್ ಅಲಿ ರಝಾ ನೂರಿ ಅವರು, ಜಮೀರ್ ಅಹಮದ್ ಖಾನ್ ಅವರು ಹಲವು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ಅಲ್ಪಸಂಖ್ಯಾತರು, ಬಡವರು, ನಿರ್ಗತಿಕರು ಹಾಗೂ ಯುವ ಸಮುದಾಯದ ಪರವಾಗಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಜನಮನ್ನಣೆ ಗಳಿಸಿವೆ ಎಂದು ತಿಳಿಸಿದರು.
ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಅನುಭವ ಹೊಂದಿರುವ ಜಮೀರ್ ಅಹಮದ್ ಖಾನ್ ಅವರು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಾಯಕರಾಗಿದ್ದು, ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯಗಳ ವಿಸ್ತರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳು ಗಮನಾರ್ಹವಾಗಿವೆ ಎಂದು ಅವರು ಹೇಳಿದರು. ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿಕೊಂಡು ಸಾಗುವ ಅವರ ನಾಯಕತ್ವ ರಾಜ್ಯಕ್ಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜನಪರ ಕಾಳಜಿ, ಅಭಿವೃದ್ಧಿ ದೃಷ್ಟಿಕೋನ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಸಚಿವ ಸಂಪುಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಫ್ಸರ್ ಬೇಗ್ ಖಾದ್ರಿ, ಅನೀಸ್ ಅಹಮದ್, ಅಲ್ಲಾಹ ಬಕ್ಷ್ ಅಮೀರಿ ಹಾಗೂ ಇತರ ಮುಖಂಡರು ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಸಭೆಯ ಕೊನೆಯಲ್ಲಿ ಜಮೀರ್ ಅಹಮದ್ ಖಾನ್ ಅವರು ಇನ್ನಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಶುಭ ಹಾರೈಸಲಾಯಿತು.






