ಬೆಂಗಳೂರು, ಜೂನ್ 9: ದಾವಣಗೆರೆ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಬಿ ಜೆಡ್ ಜಮೀರ್ ಅಹಮದ್ ಖಾನ್ ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಮಾನಹಾನಿಕರ ಸುದ್ದಿ, ಲೇಖನ, ಆಡಿಯೋ, ವಿಡಿಯೋ, ಚಿತ್ರಗಳು ಹಾಗೂ ಇತರೆ ವಿಷಯಗಳನ್ನು ಪ್ರಸಾರ, ಪ್ರಕಟಣೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡದಂತೆ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಸಿಸಿಎಚ್-58, ಮೇಯೋ ಹಾಲ್) ಮಧ್ಯಂತರ ನಿರ್ಬಂಧಕ ಆದೇಶ (ತಡೆಯಾಜ್ಞೆ) ಹೊರಡಿಸಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ವೇದಿಕೆಗಳು, ಆನ್‌ಲೈನ್ ಪೋರ್ಟಲ್‌ಗಳು, ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು, ವಾಟ್ಸ್‌ಆಪ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಜಮೀರ್ ಅಹಮದ್ ಖಾನ್ ಅವರ ವ್ಯಕ್ತಿತ್ವ, ಗೌರವ ಹಾಗೂ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ರೀತಿಯ ವಿಷಯಗಳನ್ನು ಪ್ರಸಾರ, ಅಪ್‌ಲೋಡ್, ಪೋಸ್ಟ್ ಅಥವಾ ಮರುಪೋಸ್ಟ್ ಮಾಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಮಧ್ಯಂತರ ತಡೆಯಾಜ್ಞೆಯನ್ನು ಜಾರಿಗೊಳಿಸಿ ಆದೇಶ ನೀಡಿದೆ.
ಸಾರ್ವಜನಿಕ ವ್ಯಕ್ತಿಗಳ ಮಾನಹಾನಿಗೆ ಕಾರಣವಾಗುವ ಪರಿಶೀಲಿಸದ ಹಾಗೂ ಆಧಾರರಹಿತ ಮಾಹಿತಿಯ ಪ್ರಸಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಆದೇಶ ಮಹತ್ವ ಪಡೆದಿದೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಂಬಂಧಿತ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಡಿಜಿಟಲ್ ವಿಷಯ ಸೃಷ್ಟಿಕರ್ತರು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.






