ಬೆಂಗಳೂರು, ಫೆಬ್ರವರಿ-05: ನಾಗರಿಕ ಸೇವೆಗಳ ಸುಧಾರಣೆಗಾಗಿ ನಿರಂತರ ಫೋನ್–ಇನ್ ಕಾರ್ಯಕ್ರಮ ನಡೆಸಲಾಗುವುದೆಂದು ಡಾ. ರಾಜೇಂದ್ರ ಕೆ.ವಿ ರವರು ತಿಳಿಸಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ಉದ್ದೇಶದಿಂದ ಇಂದು ಮಲ್ಲೇಶ್ವರಂ
ಐಪಿಪಿ ಕೇಂದ್ರದಲ್ಲಿ ಫೋನ್–ಇನ್ ಕಾರ್ಯಕ್ರಮ ನಡೆಸಲಾಯಿತು.
ಆಯುಕ್ತರು ನಾಗರೀಕರೊಂದಿಗೆ ದೂರವಾಣಿ ಮೂಲಕ ನೇರವಾಗಿ ಮಾತನಾಡಿ ಅಹವಾಲುಗಳನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದ ವೇಳೆ ವಿವಿಧ ವಾರ್ಡ್‌ಗಳಿಂದ ಬಂದ ಹಲವು ದೂರಗಳನ್ನು ಆಲಿಸಿ, ಅವುಗಳ ತ್ವರಿತ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
ಫೋನ್-ಇನ್ ಕಾರ್ಯಕ್ರಮದ ಪ್ರಗತಿ:
ನವೆಂಬರ್ 13 2025 ರಿಂದ ಪ್ರತಿ ಗುರುವಾರ ಆರಂಭಗೊಂಡ ಈ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು *206 ಅಹವಾಲುಗಳು ದಾಖಲಾಗಿದ್ದು, ಅವುಗಳಲ್ಲಿ 158 ಅಹವಾಲುಗಳಿಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.* ಉಳಿದ 48 ಅಹವಾಲುಗಳ ಕುರಿತು ತ್ವರಿತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇಂದು ನಡೆದ ಫೋನ್–ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 29 ಕರೆಗಳು ಬಂದಿದ್ದು, ಅವುಗಳ ಮೂಲಕ ಒಟ್ಟು 31 ಅಹವಾಲುಗಳು ದಾಖಲಾಗಿವೆ. ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ, ತಕ್ಷಣ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪ್ರತಿ ಗುರುವಾರ ಫೋನ್–ಇನ್ ಕಾರ್ಯಕ್ರಮ
ನಾಗರಿಕರ ಸಮಸ್ಯೆಗಳಿಗೆ ನೇರ ಪರಿಹಾರ ಒದಗಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸುವ ಉದ್ದೇಶದಿಂದ ನಡೆಯುತ್ತಿರುವ ಫೋನ್–ಇನ್ ಕಾರ್ಯಕ್ರಮವು ಪ್ರತಿ ಗುರುವಾರವೂ ನಿಯಮಿತವಾಗಿ ಮುಂದುವರೆಯಲಿದೆ.
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಿಗ್ವಿಜಯ್ ಬೊಡ್ಕೆ, ಕಂದಾಯ ಅಪರ ಆಯುಕ್ತರಾದ ಮಂಜುನಾಥ್ ಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.





