ಬೆಂಗಳೂರು:ಮುತ್ಯಾಲನಗರದಲ್ಲಿರುವ ಬಿಲಾಲ್ ಮಸೀದಿ ಡೆವೆಲಪ್ಮೆಂಟ್ ಸಮಿತಿ ವತಿಯಿಂದ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಗರ್ ಸಮಿಉಲ್ಲಾ, ಅಮೀರ್ ಸಾಬ್, ಫಯಾಜ್ ಖಾನ್, ಚಾನ್ ಪಾಷಾ, ದಸ್ತಗೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳು ಕುರಾನ್ ಪಠಣ (ಕಿರಾಅತ್), ಬಯಾನ್ ಹಾಗೂ ಕುರಾನಿನ ತರ್ಜುಮೆಗಳನ್ನು ನಡೆಸಿ ಸಭಿಕರ ಮೆಚ್ಚುಗೆ ಪಡೆದರು. ಐದು ಮಕ್ಕಳಿಂದ ನಡೆದ ಕುರಾನ್ ಪಠಣ ವಿಶೇಷ ಆಕರ್ಷಣೆಯಾಗಿದ್ದು, ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಮಸ್ಜಿದ್ ಎ ತಾಹ ಅಧ್ಯಕ್ಷರು ಶ್ರೀ ಕನ್ನಡ ಸಮಿಉಲ್ಲಾ ಖಾನ್ ಅವರು ಮಾತನಾಡಿ ಶೋಷಿತ ವರ್ಗಗಳ ಪ್ರದೇಶಗಳಲ್ಲಿ ಹಿರಿಯರನ್ನು ಜೊತೆಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡುತ್ತಿರುವ ತಂಡದ ಸೇವೆಯನ್ನು ಶ್ಲಾಘಿಸಿದರು. “ನಮ್ಮ ಇಸ್ಲಾಂ ಧರ್ಮವು ಯಾವುದೇ ಜಾತಿ ಅಥವಾ ಸಮುದಾಯವನ್ನು ದ್ವೇಷಿಸುವುದನ್ನು ಕಲಿಸುವುದಿಲ್ಲ. ಸಹೋದರತ್ವ, ಸಮಾನತೆ ಮತ್ತು ಶಾಂತಿಯೇ ನಮ್ಮ ಧರ್ಮದ ಮೂಲ ಮೌಲ್ಯಗಳು,” ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಚಾನ್ ಪಾಷಾ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಮಾರಂಭದಲ್ಲಿ ಸಮುದಾಯದ ಹಿರಿಯರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಕಾರ್ಯಕ್ರಮವು ಧಾರ್ಮಿಕ ಮೌಲ್ಯಗಳ ಜೊತೆಗೆ ಸಾಮಾಜಿಕ ಸೌಹಾರ್ದತೆಯ ಸಂದೇಶವನ್ನು ನೀಡಿದಂತೆ ಕಾಣಿಸಿತು.





