ಸಿರಿಗೇರಿ : ಏ14 ; ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾರತರತ್ನ ಡಾ :ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಂದೇ ಮಾತರಂ ಯುವಕ ಸಂಘದ ಮುಖಂಡ ವಿ. ಹನುಮೇಶ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಉಳ್ಳವರು ಹಾಗೂ ಮೇಲ್ವರ್ಗದ ಜನರಿಗೆ ನುಂಗಲಾರದ ತುತ್ತಾಗಿದೆ. ತುಳಿತಕ್ಕೆ ಒಳಪಟ್ಟ ಜನ ಸಂವಿಧಾನ ಕಲ್ಪಿಸಿಕೊಟ್ಟ ಶಿಕ್ಷಣವನ್ನು ಕಲಿತು ಸಂವಿಧಾನದ ಉಳಿವಿಗಾಗಿ ಶ್ರಮಿಸಬೇಕೆಂದರು.
ತದನಂತರ ಮಾತನಾಡಿದ ದಲಿತ ಮುಖಂಡ ಲಕ್ಷ್ಮಣ ಬಂಡಾರಿ ಅಂಬೇಡ್ಕರ್ ಅವರ ಹಾಗೂ ಹಿರಿಯರ ಕಾಲಘಟ್ಟದಲ್ಲಿ ಮತದಾನ ಮಾಡುವ ಹಕ್ಕು ವಿದ್ಯೆ ಕಲಿತಿರುವ, ಉಳ್ಳವರಿಗೆ, ಮೇಲ್ವರ್ಗದವರಿಗೆ ಮಾತ್ರ ಸೀಮಿತ ಗೊಂಡಿತ್ತು. ಇದನ್ನು ಬದಲಾಯಿಸಿ ಸರ್ವರಿಗೂ ಸಮಪಾಲು, ಸಮಾಜವಾದ ಸಮಾನತೆಯ ಹಕ್ಕು ಕಲ್ಪಿಸಿಕೊಟ್ಟವರೇ ಡಾ:ಬಿ.ಆರ್ ಅಂಬೇಡ್ಕರ್. ಈ ಉದ್ದೇಶದಿಂದ ಅವರನ್ನು ವಿಶ್ವಮಾನವ ಎಂದು ಪ್ರಖ್ಯಾತಿಗಳಿಸಿದ್ದು ಭಾರತೀಯರ ಹೆಮ್ಮೆಯ ಸಂಗತಿ ಎಂದರಲ್ಲದೆ, ಮಹಿಳೆಯರಿಗೆ ಮೀಸಲಾತಿ ಕೊಡಿಸುವುದರಲ್ಲಿ ಅಂಬೇಡ್ಕರ್ ಹಗಲಿರುಳು ಶ್ರಮ ಪಟ್ಟಿದ್ದಾರೆ.
ಮಾತ್ರವಲ್ಲದೆ ಇವರ ಸಂವಿಧಾನ ಬಿಡುಗಡೆಯಾಗುವವರೆಗೂ ಜಗತ್ತಿನ ಸಾಮ್ರಾಜ್ಯ ಶಾಹಿಗಳ ಕೆಂಗಣ್ಣು ಅಂಬೇಡ್ಕರ್ ಅವರ ಚಿಂತನೆಯನ್ನೇ ಗಮನಿಸುತ್ತಿತ್ತು. ಇಂಗ್ಲೆಂಡ್ ಅಮೆರಿಕ ಜಪಾನ್ ಚೀನಾ ದೇಶಗಳಂತಹ ಪ್ರಭುತ್ವ ಶಾಹಿಗಳ ಎದೆ ನಡುಗಿಸುವಂತೆ ಸಂವಿಧಾನ ರೂಪಿಸಿದ್ದು ಡಾ ಬಿ.ಆರ್. ಅಂಬೇಡ್ಕರ್.
ಇಂತಹ ಮಹಾನ್ ವ್ಯಕ್ತಿಗಳ ಸಂವಿಧಾನದ ಉಳಿವಿಗೆ ಎಲ್ಲರೂ ಶ್ರಮಿಸೋಣ ಎಂದರು. ಆನಂತರ ಕಾರ್ಯಕ್ರಮದ ಆಯೋಜಕರಾದ ನ್ಯಾಯವಾದಿ ಶೇಖರ್ ಹಾಗೂ ವಿಜಯ ಕರ್ನಾಟಕ ಪತ್ರಕರ್ತ ಪುನೀತ್ ಕುಮಾರ್ ಅಂಬೇಡ್ಕರ್ ಬರೆದಂತಹ ಸಂವಿಧಾನದ ಅಡಿಯಲ್ಲಿ ನ್ಯಾಯವಾದಿಯಾಗಿರಲಿ ಅಥವಾ ಪತ್ರಕರ್ತ ಮಿತ್ರರಾಗಿರಲಿ,ಸಮಾಜದ ಒಳಿತಿಗಾಗಿ,
ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅಂಬೇಡ್ಕರ್ ಬರೆದ ಸಂವಿಧಾನ ಇಲ್ಲದೇ ಹೋದರೆ ಜಾಗತಿಕವಾಗಿ ಭಾರತೀಯರಾದ ನಾವುಗಳು ನೊಂದವರ ಧ್ವನಿಯಾಗಿ ಪ್ರಜಾಪ್ರಭುತ್ವ, ಸಾರ್ವಭೌಮತೆ, ಗಣತಂತ್ರ ವ್ಯವಸ್ಥೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎನ್. ರಾಜಕುಮಾರ, ಸಂಜೆವಾಣಿ ವರದಿಗಾರ ಸಿ. ಶಿವರಾಂ, ವಿಜಯವಾಣಿ ಪತ್ರಕರ್ತ ಅಮೃತೇಶ್ ಸ್ವಾಮಿ, ರೈತಾಪಿ ವರ್ಗದವರಾದ ದೇವರ ಮನೆ ಹೊನ್ನೂರಪ್ಪ, ಕಟ್ಟೆಗೌಡ್ರ ಸಿದ್ದಯ್ಯ, ಚಾನಾಳ ಸಿದ್ದಯ್ಯ, ಕೊಳ್ಳಿ ಸುಂಕಯ್ಯ, ಸೇರಿದಂತೆ ಇತರರು ಇದ್ದರು.






