ಸಿರಿಗೇರಿ, ಜೂ 1:
ತುಂಗಭದ್ರಾ ರೈತ ಸಂಘದಿಂದ ಸೋಮವಾರ ರೈತ ಮುಖಂಡರಾದ ದರೂರು ಪುರುಷೋತ್ತಮ ಗೌಡ ಹಾಗೂ ಕೊಂಚಿಗೇರಿ ಅಧ್ಯಕ್ಷ ಗೋವಿಂದಪ್ಪ ಇವರ ನೇತೃತ್ವದಲ್ಲಿ ತುಂಗಭದ್ರಾ ನದಿ ಹೂಳೆತ್ತಲು ತೆರಳಿದರು. ಪ್ರಾರಂಭದಲ್ಲಿ ದರೂರು ವೀರಭದ್ರೇಶ್ವರ, ಕೊಂಚಿಗೇರಿ ರುದ್ರಪ್ಪ ತಾತನ ಮಠ, ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ನೈವೇದ್ಯ ಸಲ್ಲಿಸಿದ ರೈತಾಪಿ ವರ್ಗದ ಜನ ಸುಮಾರು 150ಕ್ಕೂ ಹೆಚ್ಚು ಟ್ಯಾಕ್ಟರ್ ಮೂಲಕ ಹೂಳೆತ್ತಲು ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರಾದ ಪುರುಷೋತ್ತಮ ಗೌಡ ಹಾಗೂ ಗೋವಿಂದಪ್ಪ ತುಂಗಭದ್ರ ನದಿ 133 ಟಿಎಂಸಿ ಸಾಮರ್ಥ್ಯ ಹೊಂದಿದೆ. 2017ರಲ್ಲಿ ಸ್ವತಹ ಸ್ವಯಂ ಪ್ರೇರಿತರಾಗಿ ರೈತರೇ ಹೂಳೆತ್ತುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದರು. ಬಳ್ಳಾರಿ,ರಾಯಚೂರು, ಕೊಪ್ಪಳ, ವಿಜಯನಗರ ಸೇರಿದಂತೆ ಸುಮಾರು ನಾಲ್ಕು ಜಿಲ್ಲೆಗಳ ರೈತರಿಗೆ ತುಂಗಭದ್ರಾ ನದಿ ಜೀವನಾಡಿಯಾಗಿದೆ.
ಸುಮಾರು 33 ಟಿಎಂಸಿ ಅಷ್ಟು ಹೂಳು ತುಂಬಿಕೊಂಡಿದ್ದರು ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೂಳು ತೆಗೆಸಲು ಸಾಧ್ಯವಾಗಿಲ್ಲ. ಹೂಳು ತೆಗೆಸಿದ್ದರೆ ಸಾವಿರಾರು ಹೆಕ್ಟೇರು ಪ್ರದೇಶಗಳಿಗೆ ನೀರು ಉಣಿಸಬಹುದಾಗಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶಾಸಕ ಸಂಸದ ಹಾಗೂ ಜನಪ್ರತಿನಿಧಿಗಳ ಅಸಹಾಯಕತೆ ಮತ್ತು ನಿರ್ಲಕ್ಷ ಧೋರಣೆಯಿಂದ ತುಂಗಭದ್ರ ನದಿ ಮೂಲೆಗುಂಪಾಗಿದೆ.
ಇದೇ ರೀತಿ ನಿರ್ಲಕ್ಷ ಧೋರಣೆ ಮುಂದುವರಿಸಿದ್ದೆ ಆದಲ್ಲಿ ರೈತ ಸಂಘಗಳೆಲ್ಲ ಒಗ್ಗೂಡಿ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತುಂಗಭದ್ರಾ ರೈತ ಸಂಘದ ಪ್ರಮುಖರಾದ ಕೊಂಚಿಗೇರಿ ಕರಣಂ ಸಿದ್ದನಗೌಡ, ಶಿವಪ್ಪ ತಾತ, ದಾಮೋದರ, ರಾಜಕುಮಾರ, ಹೊನ್ನೂರಪ್ಪ,ಸೋಮಶೇಖರ ನಾಗೇಶಪ್ಪ ರಾಮಾಂಜನಿ, ಮರಿಗೌಡ, ಈಡಿಗರ ಅಂಬಮ್ಮ ಸೇರಿದಂತೆ ನೂರಾರು ಜನ ರೈತರು ಇದ್ದರು.






